ಸಾರಾಂಶ
ರಾಮಾಯಣದ ಕಥೆಗಳು ಸಮಾಜ ಹಾಗೂ ಕುಟುಂಬಗಳು ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ
ಹೂವಿನಹಡಗಲಿ: ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ನಮಗೆಲ್ಲ ದಾರಿದೀಪವಾಗಿದೆ ಎಂದು ತಹಸೀಲ್ದಾರ್ ಜಿ. ಸಂತೋಷಕುಮಾರ ಹೇಳಿದರು.
ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮಾಯಣದ ಕಥೆಗಳು ಸಮಾಜ ಹಾಗೂ ಕುಟುಂಬಗಳು ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಇಂದಿನ ಕವಿಗಳ ಕಾವ್ಯ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದರೆ, ವಾಲ್ಮೀಕಿಯವರ ಆದಿ ಕಾವ್ಯವನ್ನು ಅರ್ಥೈಸಿಕೊಳ್ಳುವುದು ಕಷ್ಟಕರ. ಪ್ರಪಂಚದ ಬಹುಪಾಲು ಸಂಸ್ಕೃತಿಗಳು ರಾಮಾಯಣದಿಂದಲೇ ರೂಪಗೊಂಡಿವೆ ಎಂದ ಅವರು, ವಾಲ್ಮೀಕಿ ಜನಿಸಿದ ಸಮಾಜದವರಿಗೆ ಸರ್ಕಾರ ಸಾಕಷ್ಟು ಯೋಜನೆ ಅನುಷ್ಠಾನಗೊಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು, ವಾಲ್ಮೀಕಿ ಜೀವನ ಮೌಲ್ಯಗಳನ್ನು ಅರಿತು ಬದುಕಿಗೆ ಅಳವಡಿಸಿಕೊಂಡಾಗ ಮಾತ್ರ ಅಂತಹವರ ಜಯಂತಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಉಪನ್ಯಾಸಕ ಬಿ.ಎಚ್.ಎಂ. ಗುರುಬಸವರಾಜ ಮಾತನಾಡಿ, ರಾಮಾಯಣ ಗ್ರಂಥ ನೀಡಿರುವ ಆದರ್ಶ ಮೌಲ್ಯಗಳನ್ನು ಯುವ ಜನಾಂಗ ಅರಿತು ನಡೆಯಬೇಕಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ತಾಪಂ ಇಒ ಜಿ. ಪರಮೇಶ್ವರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್‌ಬೀ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾಧ್ಯಕ್ಷ ಎಲ್.ಜಿ. ಹೊನ್ನಪ್ಪನವರ, ಜಿಲ್ಲಾ ಉಪಾಧ್ಯಕ್ಷ ಯು. ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎ. ಕೊಟ್ರಗೌಡ, ಸಿಡಿಪಿಒ ರಾಮನಗೌಡ, ಪೌರಾಯುಕ್ತ ಇಮಾಮ್ ಸಾಹೇಬ್, ಬಿಸಿಎಂ ವಿಸ್ತರಣಾಧಿಕಾರಿ ಉಮೇಶ, ಬಂಜಾರ್ ಸಮಾಜದ ತಾಲೂಕಾಧ್ಯಕ್ಷ ಶ್ರೀಧರ್‌ನಾಯ್ಕ, ತಳವಾರ ಮಹಾಂತೇಶ, ಜಿ. ವಸಂತ, ದೀಪದ ಕೃಷ್ಣಪ್ಪ, ಮಾಲತಿ ಚಿಂತಿ, ಅಗಡಿ ಗಿರೀಶ, ನಿಂಗಪ್ಪ, ಯು. ಮಂಜುನಾಥ, ಗೊಣೆಪ್ಪ ಸೇರಿದಂತೆ ಇತರೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.