ವಿಶ್ವಕ್ಕೇ ಮಾದರಿ ಮಹಾಕಾವ್ಯ ರಾಮಾಯಣ: ಶಾಸಕ ‌ಅಲ್ಲಮಪ್ರಭು ಪಾಟೀಲ

| Published : Oct 08 2025, 01:00 AM IST

ವಿಶ್ವಕ್ಕೇ ಮಾದರಿ ಮಹಾಕಾವ್ಯ ರಾಮಾಯಣ: ಶಾಸಕ ‌ಅಲ್ಲಮಪ್ರಭು ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ‌ ವಿಶ್ವಕ್ಕೆ ರಾಮಾಯಣ ಮಹಾಕಾವ್ಯದ ಮೂಲಕ ಭರತ‌ ಖಂಡದ ಸಂಸ್ಕೃತಿ,‌ ಸಂಸ್ಕಾರ ಮತ್ತು ಮಾನವೀಯ ಮೌಲ್ಯವನ್ನು ತಿಳಿಸಿಕೊಟ್ಟ ಮೊದಲ ಮಹಾ ಕವಿ ವಾಲ್ಮೀಕಿಯವರಾಗಿದ್ದಾರೆ‌ ಎಂದು ಶಾಸಕ ‌ಅಲ್ಲಮಪ್ರಭು ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಡೀ‌ ವಿಶ್ವಕ್ಕೆ ರಾಮಾಯಣ ಮಹಾಕಾವ್ಯದ ಮೂಲಕ ಭರತ‌ ಖಂಡದ ಸಂಸ್ಕೃತಿ,‌ ಸಂಸ್ಕಾರ ಮತ್ತು ಮಾನವೀಯ ಮೌಲ್ಯವನ್ನು ತಿಳಿಸಿಕೊಟ್ಟ ಮೊದಲ ಮಹಾ ಕವಿ ವಾಲ್ಮೀಕಿಯವರಾಗಿದ್ದಾರೆ‌ ಎಂದು ಶಾಸಕ ‌ಅಲ್ಲಮಪ್ರಭು ಪಾಟೀಲ ಹೇಳಿದರು.

ಮಂಗಳವಾರ ಇಲ್ಲಿನ ಡಾ.ಎಸ್.ಎಂ.ಪಂಡಿತ್‌ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,‌ ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ‌ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಅವರ ರಾಮಾಯಣ‌ ಮಹಾಕಾವ್ಯ ದೇಶದ ಸಾಹಿತ್ಯಕ್ಕೆ ಅತ್ಯುನ್ನತ ಕೊಡುಗೆಯಾಗಿದೆ. ರಾಜ ನೀತಿ, ರಾಜ ಧರ್ಮ, ಮಾನವೀಯ ಮೌಲ್ಯ, ಸಂಸ್ಕಾರ, ಸಂಸ್ಕೃತಿ ಕುರಿತು ಹಾಗೂ ಮಾನವರೆಲ್ಲರು ಒಂದೇ ಎಂಬ ಸಂದೇಶ‌ ನೀಡಿದ ವಾಲ್ಮೀಕಿಯವರ ತತ್ವದಂತೆ ಅಕ್ಷರ ಮತ್ತು ಸಂಸ್ಕಾರ ಕಲಿಯೋಣ. ಶಿಷ್ಠರನ್ನು ರಕ್ಷಿಸುವ ದುಷ್ಠರನ್ನು ಶಿಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ‌ ಕಮಕನೂರ ಮಾತನಾಡಿ, ವಾಲ್ಮೀಕಿ ಸಮುದಾಯ ಮಾತೃ ಹದಯವಿದ್ದಂತೆ.‌ ಎಲ್ಲರನ್ನು ತೆಗೆದುಕೊಂಡು ಹೋಗುವ ನಾಯಕತ್ವದ ಗುಣ ಅವರಲ್ಲಿದೆ. ವಿಶ್ವಕ್ಕೆ ಮಾದರಿ ಮಹಾಕಾವ್ಯ "ರಾಮಾಯಣ " ನೀಡಿದ ವಾಲ್ಮೀಕಿ ಸಮ‌-ಸಮಾಜದ‌ ನಿರ್ಮಾತೃವಾಗಿದ್ದಾರೆ. ಹಿಂದುಳಿದ ಈ ಸಮುದಾಯ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ರಾಮಾಯಣ ಮತ್ತು ವಾಲ್ಮೀಕಿ‌ ಸಮಗ್ರ ಸಂಶೋಧನೆಯಾಗಲಿ:

ವಿಶೇಷ‌ ಉಪನ್ಯಾಸಕರಾಗಿ ಆಗಮಿಸಿದ ಸುರಪುರ ತಾಲೂಕಿನ ಪ್ರಭು ಮಹಾವಿದ್ಯಾಲಯದ ಉಪನ್ಯಾಸಕ ಡಾ.ಉಪೇಂದ್ರ‌ ನಾಯಕ್ ಮಾತನಾಡಿ, ರಾಮಾಯಣ ಮತ್ತು ವಾಲ್ಮೀಕಿ ಕುರಿತು ಪ್ರಗತಿಪರರು, ಬುದ್ದಿಜೀವಿಗಳೆಂದು ಕರೆಸಿಕೊಂಡವರು ಅನೇಕ ಸುಳ್ಳು, ಕಪೋಲ ಕಲ್ಪಿತ ವಿಚಾರಗಳನ್ನು ಬಿತ್ತಿದ್ದಾರೆ. ವಾಲ್ಮಿಕಿಯನ್ನು ದರೋಡೆಕೋರನೆಂದು ಬಿಂಬಿಸಿದ್ದಾರೆ. ಹೀಗಾಗಿ ನೈಜ ಸತ್ಯ ಹೊರಹಾಕಲು ಸರ್ಕಾರ ಸಂಶೋಧನೆ ಮಾಡಬೇಕಿದೆ ಎಂದರು.

ಪಾಶ್ಚಿಮಾತ್ಯ ರಾಷ್ಟ್ರಗಳು ಇಂದು ನಮ್ಮ ದೇಶದ ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ ಅರಿಯಲು ಉತ್ಸುಕರಾಗಿದ್ದಾರೆ ಅಂದರೆ ಅದಕ್ಕೆ ಕಾರಣೀಭೂತರು ವಾಲ್ಮೀಕಿಯವರು. ಆದರೆ ನಾವು ನಮ್ಮ ಸಂಸ್ಕೃತಿಯನ್ನೆ ಮರೆತು ನಮ್ಮತನವನ್ನು ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದು ದುರ್ದೈವದ ಸಂಗತಿ. 24 ಸಾವಿರ ಶ್ಲೋಕ, 7 ಖಂಡ‌ ಒಳಗೊಂಡ ರಾಮಾಯಣದ‌ ಮೂಲಕ ವಾಲ್ಮೀಕಿ ಅವರು ವಿಶ್ವಕ್ಕೆ ವಸುದೈವ‌ ಕುಟುಂಬಕಂ ಪರಿಕಲ್ಪನೆ ನೀಡಿದ್ದವರಾಗಿದ್ದಾರೆ. ಇಂತಹ ವಾಲ್ಮೀಕಿ ಸಮಾಜ ಇಂದು ನಾಯಕತ್ವ, ರಾಜಕೀಯ, ಒಗ್ಗಟಿನ ಕೊರತೆ ಅನುಭವಿಸುತ್ತಿದೆ ಎಂದರು.

ಮಹಾಪೌರರಿಂದ ಮೆರವಣಿಗೆಗೆ ಚಾಲನೆ:

ವೇದಿಕೆ ಕಾರ್ಯಕ್ರಮದ ಮುನ್ನ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ರಂಗಮಂದಿರದವರೆಗೆ ನಡೆದ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆಯಾಗಿರುವ ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮೊದಲಾದವರು ಇದ್ದರು.

ಕಾರ್ಯಕ್ರಮದಲ್ಲಿ‌ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ನಂದಕುಮಾರ ಮಾಲಿಪಾಟೀಲ, ಗೌರವಾಧ್ಯಕ್ಷ ಗುರುರಾಜ ಎಚ್. ಸುಬೇದಾರ, ಸಮಾಜ‌ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಆಹಾರ ಇಲಾಖೆಯ ಉಪನಿರ್ದೇಶಕ ಭೀಮರಾಯ, ರೇಷ್ಮೆ‌ ಇಲಾಖೆಯ ಪ್ರಕಾಶ, ಪ್ರಾಂಶುಪಾಲರಾದ ಶಿವರಾಮ‌ ಚವ್ಹಾಣ, ಅಮರನಾಥ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಮಾಜದ ಬಾಂಧವರು,‌ ಮುಖಂಡರು ಭಾಗವಹಿಸಿದ್ದರು. ಡಾ.ರಾಜಶೇಖರ್‌ ಎಸ್.

‌ಮಾಂಗ್ ನಿರೂಪಿಸಿದರು, ವಿದ್ಯಾಧರ‌ ಕಾಂಬಳೆ‌ ಸ್ವಾಗತಿಸಿದರು.