ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವಾಲ್ಮೀಕಿ ರಚಿತ ರಾಮಾಯಣವು ಸೂರ್ಯ, ಚಂದ್ರ ಮತ್ತು ಭೂಮಿ ಇರುವವರೆಗೆ ಅಮರವಾಗಲಿರುವ ಮಹಾಕಾವ್ಯ ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮಂಗಳವಾರ ಹೇಳಿದರು.ಪಟ್ಟಣದ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ವಾಲ್ಮೀಕಿ ರಾಮಾಯಣ ಅನೇಕ ನೈತಿಕ ಸಂದೇಶಗಳು ಮತ್ತು ಜೀವನ ಮೌಲ್ಯಗಳು ಕಲಿಸುತ್ತದೆ. ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಭಾರತೀಯ ಸಂಸ್ಕೃತಿಯ ಅನಾವರಣವೇ ಆಗಿದೆ ಎಂದರು.
ವಾಲ್ಮೀಕಿ ಶೂದ್ರ ಸಮುದಾಯದಲ್ಲಿ ಜನಿಸಿದರೂ ರಾಮಾಯಣದಂತಹ ಶ್ರೇಷ್ಠ ಮಹಾಕಾವ್ಯ ಗ್ರಂಥವನ್ನು ವಿಶ್ವಕ್ಕೆ ನೀಡಿದ್ದಾರೆ. ರಾಮಾಯಣ ಕೇವಲ ಕಥೆಯಲ್ಲ ನಮ್ಮ ನೈತಿಕ ಮೌಲ್ಯಗಳು, ಧರ್ಮ ಮತ್ತು ಸತ್ಯದ ಮಾರ್ಗಗಳನ್ನು ಕಲಿಸುವ ಮಹಾನ್ ಗ್ರಂಥವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ಮಾತನಾಡಿ, ವಾಲ್ಮೀಕಿ ಜಯಂತಿ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು, ಅವರ ಆದರ್ಶಗಳನ್ನು ನಾವುಗಳು ಅನುಸರಿಸುವುದರೊಂದಿಗೆ ಸತ್ಯ, ಧರ್ಮ ಅದು ನೈತಿಕ ಮಾರ್ಗದಲ್ಲಿ ನಡೆಯಬೇಕು ಎಂದರು.
ಈ ವೇಳೆ ಎಚ್.ಕೆ.ವೀರಣ್ಣಗೌಡ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎಸ್.ಸಂದೀಪ್ ವಾಲ್ಮೀಕಿ ಮಹರ್ಷಿ ಕುರಿತು ಪ್ರಧಾನ ಭಾಷಣ ಮಾಡಿದರು. ನಗರಸಭಾ ಅಧ್ಯಕ್ಷೆ ಕೋಕಿಲ ಅರುಣ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ತಾಪಂ ಇಒ ರಾಮಲಿಂಗಯ್ಯ, ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಲ್.ನಾಗರಾಜು, ನಗರಸಭೆ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವನಿತಾ, ಸದಸ್ಯ ಸರ್ವಮಂಗಳ, ಸುರೇಶ್ ಕುಮಾರ್, ಮತ್ತಿತರು ಭಾಗವಹಿಸಿದ್ದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ನರಸಿಂಹಸ್ವಾಮಿ ದೇಗುಲದ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ನಗರಸಭೆಯವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.