ಬಾಳೆಹೊನ್ನೂರುಕಸ್ತೂರಿ ರಂಗನ್ ವರದಿ ಜಾರಿಗೆ ಹೊರಡಿಸಿರುವ ಕರಡು ಅಧಿಸೂಚನೆ ವಿರೋಧಿಸಿ ಬಾಳೆಹೊನ್ನೂರಿನಲ್ಲಿ ಗುರುವಾರ ನಡೆಯಲಿರುವ ಬಾಳೆಹೊನ್ನೂರು ಬಂದ್ ಹಾಗೂ ಪ್ರತಿಭಟನಾ ಸಭೆಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೋರಾಟ ಸಮಿತಿಯಿಂದ ಶ್ರೀಗಳಿಗೆ ಆಹ್ವಾನ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಕಸ್ತೂರಿ ರಂಗನ್ ವರದಿ ಜಾರಿಗೆ ಹೊರಡಿಸಿರುವ ಕರಡು ಅಧಿಸೂಚನೆ ವಿರೋಧಿಸಿ ಬಾಳೆಹೊನ್ನೂರಿನಲ್ಲಿ ಗುರುವಾರ ನಡೆಯಲಿರುವ ಬಾಳೆಹೊನ್ನೂರು ಬಂದ್ ಹಾಗೂ ಪ್ರತಿಭಟನಾ ಸಭೆಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೋರಾಟ ಸಮಿತಿಯಿಂದ ಮಂಗಳವಾರ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಮಲೆನಾಡಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ ವಿರುದ್ಧದ ಪ್ರತಿಭಟನಾ ಸಭೆಗೆ ಆಹ್ವಾನ ನೀಡಿದ್ದು, ಸಭೆಯಲ್ಲಿ ಭಾಗವಹಿಸಿ ವರದಿಯ ವಿರುದ್ಧ ಮಾತನಾಡುವ ಭರವಸೆಯನ್ನು ಶ್ರೀಗಳು ಸಮಿತಿಗೆ ನೀಡಿದ್ದಾರೆ.

ಈಸುದ್ದಿಗಾರರೊಂದಿಗೆ ಶ್ರೀಗಳು ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಪಶ್ಚಿಮಘಟ್ಟ ಹಾಗೂ ಮಲೆನಾಡು ಪ್ರಾಂತ ಪ್ರದೇಶಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ಈ ಕುರಿತು ಈ ಭಾಗದ ಜನರು ಸಂಘಟಿತರಾಗಿ ಹೋರಾಟ ಮಾಡ ಬೇಕಾದ ಅವಶ್ಯಕತೆಯಿದೆ. ಪ್ರಸ್ತುತ ವರದಿ ವಿರುದ್ಧ ಬಾಳೆಹೊನ್ನೂರು ಪಟ್ಟಣದಲ್ಲಿ ಆಯೋಜಿಸಿರುವ ಹೋರಾಟ ಸಮಯೋಚಿತವಾಗಿದೆ. ಈ ಹೋರಾಟಕ್ಕೆ ಶ್ರೀ ಜಗದ್ಗುರು ರಂಭಾಪುರಿ ಪೀಠ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.

ವರದಿ ಜಾರಿ ಅಧಿಸೂಚನೆಯಿಂದ ಮಲೆನಾಡಿನ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದು, ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ವರದಿಯನ್ನು ಯಾವುದೋ ಒತ್ತಡಕ್ಕೆ ಒಳಗಾಗಿ ನೀಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಮಲೆನಾಡಿಗರ ಹಿತ ಕಾಯುವಂತೆ ನಾವುಗಳು ಒತ್ತಡ ಹೇರಬೇಕಿದೆ. ಧರ್ಮಪೀಠದ ಜಗದ್ಗುರುಗಳಾದ ನಾವು ಜನಸಾಮಾನ್ಯರ ದನಿಯಾಗಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುತ್ತಿದ್ದು, ನಮ್ಮ ಪೀಠದ ಅಂತರಂಗದ ವಿಚಾರವನ್ನು ಕೇಂದ್ರ, ರಾಜ್ಯ ಸರ್ಕಾರಗಳಿಗೆ ತಲುಪಿಸಲು ಆಶೀರ್ವಚನದಲ್ಲಿ ಒತ್ತಡ ಹೇರುತ್ತೇವೆ.

ಈ ಬಂದ್ ಮತ್ತು ಹೋರಾಟ ಸಭೆಯಲ್ಲಿ ಈ ಭಾಗದ ಎಲ್ಲಾ ರೈತರು, ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ರಾಜಕೀಯ ಬೇಧ ಮರೆತು ಭಾಗವಹಿಸಿ ಯಶಸ್ವಿಗೊಳಿಸುವಂತೆ ಶ್ರೀಗಳು ತಿಳಿಸಿದ್ದಾರೆ.

ಹೋರಾಟ ಸಮಿತಿ ಪ್ರಮುಖರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ಎಂ.ಎಸ್.ಅರುಣೇಶ್, ಕೆ.ಆರ್.ದೀಪಕ್ ಕೊಳಲೆ, ಹಿರಿಯಣ್ಣ, ರವಿಚಂದ್ರ, ಮಹಮ್ಮದ್ ಜುಹೇಬ್, ಕೆ.ಕೆ.ವೆಂಕಟೇಶ್, ಎಚ್.ಎಸ್.ಕೌಶಿಕ್ ಪಟೇಲ್, ಟಿ.ಆರ್.ಧರ್ಮೇಗೌಡ, ಕೆ.ಟಿ.ವೆಂಕಟೇಶ್, ಎಚ್.ಡಿ.ಸತೀಶ್, ಕಾರ್ತಿಕ್ ಕಾರ್‌ಗದ್ದೆ, ಕೆ.ಆರ್.ಚಂದ್ರೇಗೌಡ ಮತ್ತಿತರರು ಇದ್ದರು.೦೮ಬಿಹೆಚ್‌ಆರ್ ೮:

ಬಾಳೆಹೊನ್ನೂರಲ್ಲಿ ಗುರುವಾರ ನಡೆಯಲಿರುವ ಬಂದ್ ಹಾಗೂ ಪ್ರತಿಭಟನಾ ಸಭೆಗೆ ಭಾಗವಹಿಸುವಂತೆ ಕೋರಿ ಹೋರಾಟ ಸಮಿತಿಯಿಂದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ಆಹ್ವಾನ ನೀಡಲಾಯಿತು.