ರಾಮೇಗೌಡಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2025, 02:00 AM IST

ಸಾರಾಂಶ

ಕಾಡು ಜಾತಿಯ ಸಸ್ಯ ಸಂರಕ್ಷಕ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಲಿಗ ಜನಾಂಗದ ರಾಮೇಗೌಡ (47) ಅವರು ಈ ಬಾರಿ ಪರಿಸರ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ, ಯಳಂದೂರು

ಕಾಡು ಜಾತಿಯ ಸಸ್ಯ ಸಂರಕ್ಷಕ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಲಿಗ ಜನಾಂಗದ ರಾಮೇಗೌಡ (47) ಅವರು ಈ ಬಾರಿ ಪರಿಸರ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂದು ಕಾಡು ಮರಗಳು ಕಡಿಮೆಯಾಗುತ್ತಿದೆ. ಕಾಡಿನಿಂದ ಪ್ರಾಣಿ, ಸಸ್ಯ ಸಂಕುಲಗಳ ಉಳಿವಾಗುತ್ತದೆ. ಅಲ್ಲದೆ ಇದು ಜೀವ ಜಗತ್ತಿಗೆ ಅನಿವಾರ್ಯವಾಗಿದೆ. ಕಾಡು ಸಸ್ಯಗಳಲ್ಲಿ ಅನೇಕ ಜೀವಾಮೃತಗಳಿವೆ. ಇದನ್ನು ಸಂರಕ್ಷಿಸಿಸುವ ಕೆಲಸದಲ್ಲಿ ಅವರು ನಿರತರಾದ ಹಿನ್ನೆಲೆ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ. ರಾಮೇಗೌಡ ಬೆಟ್ಟದ ಕಾಡಿನ ಪರಿಸರದಲ್ಲೇ ಬೆಳೆದಿದ್ದಾರೆ. ರಾಮಿನಂಜೇಗೌಡ ಕೇತಮ್ಮ ದಂಪತಿ ಪುತ್ರರಾದ ಇವರು ತಮ್ಮ ತಂದೆಯವರು ಔಷಧಿಯ ಸಸ್ಯಗಳನ್ನು ಬೆಳೆಯುತ್ತಿದ್ದು ನಾಟಿ ಔಷಧಿಯನ್ನು ನೀಡುತ್ತಿದ್ದನ್ನು ನೋಡಿ ಬೆಳೆದ ಇವರಿಗೆ ಔಷಧಿ ಗಿಡಗಳು ಹಾಗೂ ಕಾಡು ಜಾತಿ ಗಿಡಗಳೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಇತ್ತೀಚೆಗೆ ಈ ಗಿಡಗಳ ಸಂತತಿ ನಶಿಸಿ ಹೋಗುತ್ತಿದ್ದು ಇದನ್ನು ಸಂರಕ್ಷಿಸಬೇಕೆಂಬ ಉದ್ದೇಶದಿಂದ ಇವರು ತಮ್ಮ ನರ್ಸರಿಯಲ್ಲಿ ಅಪರೂಪದ ಕಾಡು, ಹಾಗೂ ಔಷಧಿ ಸಸ್ಯಗಳ ವನ ಮಾಡಿದ್ದಾರೆ. ಇದಕ್ಕೆ ಕುಟುಂಬ ವರ್ಗವು ಸಹಾಯ ಮಾಡುತ್ತಿದೆ. ಅಪರೂಪದ ಕಾಡು ಸಸ್ಯಗಳನ್ನು ಬೆಂಗಳೂರು ನಗರ, ಬನ್ನೇರುಘಟ್ಟ, ಮಾಕಳಿಬೆಟ್ಟ ಸೇರಿದಂತೆ ನಾಡಿನ ಉದ್ದಗಲಕ್ಕೆ ನೀಡಿದ್ದಾರೆ. ಇವರ ಬಳಿ ಅತಿ ಅಪರೂಪದ ಜಾಲ, ಆಳಲೆ, ನೀಳಲು, ಮಾಕಳಿ ಬೇರು, ಸೇರಿದಂತೆ ವಿಭಿನ್ನ ಪ್ರಬೇಧ ಗಿಡಗಳನ್ನು ಕಾಡಿನಿಂದ ಬೀಜವನ್ನು ತಂದು ಇದನ್ನು ತಮ್ಮ ನರ್ಸರಿಯಲ್ಲಿ ಬೆಳೆಸಿ ಈ ಗಿಡಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅತ್ಯಂತ ಖುಷಿಯಾಗಿದೆ. ಗಿಡಗಳನ್ನು ನನ್ನ ಮಕ್ಕಳಂತೆ ಪೋಷಿಸುತ್ತಿದ್ದೇನೆ. ಅರಣ್ಯ ಎಂದರೆ ಬಹಳ ಇಷ್ಟ ಗಿಡಗಳ ಪೋಷಣೆಗೆ ನನ್ನ ಕುಟುಂಬ ನನ್ನ ಸಹಕಾರಕ್ಕಿದೆ. ನನ್ನ ಜೀವನವೂ ಇದರಿಂದ ನಡೆಯುತ್ತಿದೆ. ಈಗ ಪ್ರಶಸ್ತಿ ಲಭಿಸಿರುವುದು ನನಗೆ ಅತೀವ ಸಂತಸ ತಂದಿದ್ದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ರಾಮೇಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು