ಮಾಧ್ಯಮ ಸ್ಪಂದನದ ಮೂಲಕ ಸಲ್ಲಿಸಿರುವ ಜನಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ “ಅನುದಿನದ ತೆರೆಮರೆಯ ಸಾಧಕ” ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾಧ್ಯಮ ಸ್ಪಂದನದ ಮೂಲಕ ಸಲ್ಲಿಸಿರುವ ಜನಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ “ಅನುದಿನದ ತೆರೆಮರೆಯ ಸಾಧಕ” ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜೀ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ 25 ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯ ಉದ್ದೇಶದಿಂದ ಕೊಡಗಿನ ಪತ್ರಕರ್ತರನ್ನು ಒಗ್ಗೂಡಿಸಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು “ಮಾಧ್ಯಮ ಸ್ಪಂದನ” ಸಂಸ್ಥೆಯನ್ನು ಸ್ಥಾಪಿಸಿದರು. ಕೋವಿಡ್ ಅವಧಿಯಲ್ಲಿ ಅಗತ್ಯವಿರುವವರಿಗೆ ಆಹಾರ ಕಿಟ್‌ಗಳು ಮತ್ತು ಔಷಧಗಳನ್ನು ವಿತರಿಸುವುದು, ಹೊರ ಜಿಲ್ಲೆಗಳಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಕೋವಿಡ್‌ಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆಯನ್ನು ಸಹ ಮಾಧ್ಯಮ ಸ್ಪಂದನದ ಮೂಲಕ ನೆರವೇರಿಸಲಾಯಿತು.

ಕೋವಿಡ್ ನಂತರವೂ ಮಾಧ್ಯಮ ಸ್ಪಂದನ ತನ್ನ ಜನಸೇವೆಯನ್ನು ಮುಂದುವರಿಸಿದ್ದು, ದಾನಿಗಳ ನೆರವಿನಿಂದ ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಅಸಹಾಯಕರ ವೈದ್ಯಕೀಯ ಚಿಕಿತ್ಸೆಗೆ ನೆರವು ಒದಗಿಸಿದೆ. ಅಲ್ಲದೆ “ಡ್ರಗ್ಸ್ ಮುಕ್ತ ಕೊಡಗು” ಜಾಗೃತಿ ಅಭಿಯಾನವನ್ನು ನಡೆಸಿ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದೆ.

ಜಾತಿ, ಧರ್ಮ, ಮತ, ಪಂಥ ಅಥವಾ ವ್ಯಕ್ತಿಯ ಭೇದವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಸ್ಪಂದನ ತಂಡ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.