ಸಿಂಗಲ್ಸ್‌ ಫೈನಲ್‌ಗೆ ರಾಮಕುಮಾರ, ದಿಗ್ವಿಜಯ ಪ್ರತಾಪಸಿಂಗ್‌

| Published : Oct 22 2023, 01:00 AM IST

ಸಿಂಗಲ್ಸ್‌ ಫೈನಲ್‌ಗೆ ರಾಮಕುಮಾರ, ದಿಗ್ವಿಜಯ ಪ್ರತಾಪಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಏಷಿಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ರಜತ ಪದಕ ತಂದುಕೊಟ್ಟ 28ರ ಹರೆಯದ ರಾಮಕುಮಾರ ರಾಮನಾಥನ್‌ ಮತ್ತು ದಿಗ್ವಿಜಯ ಪ್ರತಾಪಸಿಂಗ್‌ ಐಟಿಎಫ್‌ ವಿಶ್ವ ಪುರುಷರ ಟೆನಿಸ್‌ ಟೂರ್‌ ಪಂದ್ಯಾವಳಿಯಲ್ಲಿ ಸಿಂಗಲ್ಸ್‌ ಪ್ರಶಸ್ತಿಗಾಗಿ ಭಾನುವಾರ ಹಣಾಹಣಿ ನಡೆಸಲಿದ್ದಾರೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಏಷಿಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ರಜತ ಪದಕ ತಂದುಕೊಟ್ಟ 28ರ ಹರೆಯದ ರಾಮಕುಮಾರ ರಾಮನಾಥನ್‌ ಮತ್ತು ದಿಗ್ವಿಜಯ ಪ್ರತಾಪಸಿಂಗ್‌ ಐಟಿಎಫ್‌ ವಿಶ್ವ ಪುರುಷರ ಟೆನಿಸ್‌ ಟೂರ್‌ ಪಂದ್ಯಾವಳಿಯಲ್ಲಿ ಸಿಂಗಲ್ಸ್‌ ಪ್ರಶಸ್ತಿಗಾಗಿ ಭಾನುವಾರ ಹಣಾಹಣಿ ನಡೆಸಲಿದ್ದಾರೆ.

ಇಲ್ಲಿಯ ಧಾರವಾಡ ಜಿಲ್ಲಾ ಟೆನಿಸ್‌ ಸಂಸ್ಥೆ ರಾಜಾಧ್ಯಕ್ಷ ಪೆವಿಲಿಯನ್‌ ಕೋರ್ಟ್‌ನಲ್ಲಿ ಶನಿವಾರ ನಡೆದ ತುರುಸಿನ ಸೆಮಿ ಫೈನಲ್‌ ಪಂದ್ಯಗಳಲ್ಲಿ 4ನೇ ಶ್ರೇಯಾಂಕಿತ ರಾಮಕುಮಾರ ಅಗ್ರ ಶ್ರೇಯಾಂಕಿತ ಅಮೇರಿಕಾ ನಿಕ್‌ ಚಾಪೆಲ್‌ ಅವರನ್ನು ಭಾರೀ ಸೆಣಸಾಟದ ನಂತರ 3-6, 6-3, 7-6 (7-2)ರಿಂದ ಪರಾಭವಗೊಳಿಸಿ ಪ್ರಶಸ್ತಿ ಹೋರಾಟಕ್ಕೆ ಮುನ್ನಡೆದರು. ಹಾಗೆಯೇ, ಇನ್ನೊಂದು ಸೆಮಿ ಫೈನಲ್ಸ್‌ನಲ್ಲಿ 3ನೇ ಶ್ರೇಯಾಂಕಿತ ದಿಗ್ವಿಜಯ ಪ್ರತಾಪಸಿಂಗ್‌, ಬೋಗಡಾನ್‌ ಬ್ರೋಬ್ರೋ ಅವರ ಮೇಲೆ 6-4, 6-2 (7-2), 6-4 ರಿಂದ ಪ್ರಯಾಸಕರ ಗೆಲವು ಸಾಧಿಸಿ ಫೈನಲ್ಸ್‌ ತಲುಪಿದರು.

ಸಿಂಗಲ್ಸ್‌ ಸೆಮಿ ಫೈನಲ್‌ಗೆ ಮೊದಲ ನಾಲ್ಕು ಶ್ರೇಯಾಂಕಿತರು ಅರ್ಹತೆ ಪಡೆದಿದ್ದರಿಂದ ಶ್ರೇಷ್ಠ ದರ್ಜೆಯ ಟೆನಿಸ್‌ ಆಟವನ್ನು ಧಾರವಾಡದ ಕ್ರೀಡಾಪ್ರೇಮಿಗಳು ನಿರೀಕ್ಷಿಸಿದ್ದರು. ಅಂತೆಯೇ, ಶ್ರೇಯಾಂಕಿತರು ಪ್ರೇಕ್ಷಕರನ್ನು ನಿರಾಸೆಗೊಳಿಸಲಿಲ್ಲ.

ಚಾಪೆಲ್‌, ರಾಮಕುಮಾರ ರೋಚಕ ಆಟ

ಮೊದಲನೆಯ ಸೆಮಿ ಫೈನಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ನಿಕ್‌ ಚಾಪೆಲ್‌ 3ನೇ ಗೇಮ್‌ನಲ್ಲಿ ರಾಮಕುಮಾರರ ಸರ್ವೀಸ್‌ ಮುರಿದು 4-1ರ ಮುನ್ನಡೆ ಸಾಧಿಸಿದ್ದರು. ನಂತರ 6-3 ರಿಂದ ಮೊದಲ ಸೆಟ್‌ ಗೆದ್ದರು. 2ನೇ ಸೆಟ್‌ನಲ್ಲಿ ಸ್ಥಳೀಯ ಪ್ರೇಕ್ಷಕರ ಭಾರೀ ಬೆಂಬಲದೊಂದಿಗೆ ಬಿರುಸಿನ ಆಟ ಪ್ರದರ್ಶಿಸಿದ ರಾಮಕುಮಾರ, 4ನೇ ಗೇಮ್‌ನಲ್ಲಿ ಚಾಪೆಲ್‌ರ ಸರ್ವೀಸ್‌ ಮುರಿದು 6-3 ರಿಂದ ಸೆಟ್‌ ಗೆಲ್ಲುವ ಮೂಲಕ ಪಂದ್ಯವನ್ನು ಸಮಸ್ಥಿತಿಗೆ ತಂದರು. ನಿರ್ಣಾಯಕವಾದ 3ನೇ ಸೆಟ್‌ ಅನೇಕ ಆತಂಕಕಾರಿ ಕ್ಷಣಗಳನ್ನು ಕಂಡಿತು. ರಾಮಕುಮಾರ 2-5 ಗೇಮ್‌ಗಳಿಂದ ಹಿನ್ನಡೆಯಲ್ಲಿದ್ದು ಇನ್ನೇನು ಅವರ ಸೋಲು ಖಚಿತ ಎಂದು ಭಾವಿಸಿದ್ದ ಪ್ರೇಕ್ಷಕರಿಗೆ ಅಚ್ಚರಿ ಎನ್ನುವಂತೆ ಬಿರುಸಿನ ಸರ್ವೀಸ್‌ಗಳ ಮೂಲಕ ಒಂದೊಂದೆ ಪಾಯಿಂಟ್‌ ಪಡೆಯುತ್ತಾ 5-5ರಲ್ಲಿ ಸಮಸ್ಥಿತಿಗೆ ಪಂದ್ಯವನ್ನು ತಂದರು. ಸ್ಕೋರ್‌ 6-6 ಆಗಿದ್ದಾಗ ಟೈ ಬ್ರೇಕರ್‌ ಅಳವಡಿಸಲಾಯಿತು. ಕೇವಲ 2 ಪಾಯಿಂಟ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟ ರಾಮಕುಮಾರ, 7 ಪಾಯಿಂಟ್‌ಗಳನ್ನು ಗೆದ್ದು ವಿಜಯದ ಕೇಕೆ ಹಾಕಿದರು. ಕೊನೆಯ ಪಾಯಿಂಟ್‌ನಲ್ಲಿ ಚಾಪೆಲ್‌ ಗಳಿಸಿದ ಚೆಂಡು ಗೆರೆಯ ಹೊರಗೆ ಬಿದ್ದು ರಾಮಕುಮಾರಗೆ ಗೆಲವು ದೊರೆಯುತ್ತಿದ್ದಂತೆ ರಾಮಕುಮಾರ ಬಾಗಿ ನಿಂತು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು.

ವಿಜಯಿಯಾದ ದಿಗ್ವಿಜಯ.

2ನೇ ಸೆಮಿ ಫೈನಲ್‌ ಕೂಡಾ ಪ್ರೇಕ್ಷಕರನ್ನು ತುದಿಗಾಲಿನ ಮೇಲೆ ನಿಲ್ಲಿಸಿತು. ದಿಗ್ವಿಜಯ ಪ್ರತಾಪಸಿಂಗ್‌ ಮೊದಲ ಸೆಟ್‌ನಲ್ಲಿ ಮೊದಲ ಗೇಮ್‌ನಲ್ಲಿಯೇ ಎದುರಾಳಿ ಸರ್ವೀಸ್‌ ಮುರಿದು 6-4 ರಿಂದ ಸೆಟ್‌ ಗೆದ್ದರು. 2ನೇ ಸೆಟ್‌ನಲ್ಲಿ 5-4 ರಿಂದ ಮುನ್ನಡೆಯಲಿದ್ದು 10ನೇ ಗೇಮ್‌ನಲ್ಲಿ 30-0 ಸ್ಕೋರ್‌ನೊಂದಿಗೆ ಸರ್ವೀಸ್‌ ಮಾಡುತ್ತಿದ್ದ ದಿಗ್ವಿಜಯ ಇನ್ನೇನು ಗೆದ್ದೇ ಬಿಟ್ಟರು ಎನ್ನುವಷ್ಟರಲ್ಲಿ ಅನಪೇಕ್ಷಿತ ತಪ್ಪುಗಳನ್ನು ಎಸಗಿ ಆ ಗೇಮ್‌ ಕಳೆದುಕೊಂಡರಲ್ಲದೇ ಪಂದ್ಯ ಟೈ ಬ್ರೇಕರ್‌ ವರೆಗೆ ಎಳೆಯುವಂತಾಯಿತು. ಬೋಬ್ರೋ ಇದರ ಪ್ರಯೋಜನ ಪಡೆದು ಟೈ ಬ್ರೇಕರ್‌ನ್ನು 7-2ರಿಂದ ಗೆಲ್ಲುವ ಮೂಲಕ 2ನೇ ಸೆಟ್‌ ಗೆದ್ದರು. 3ನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಬೋಬ್ರೋರಿಂದ ಪ್ರತಿರೋಧ ತಡವಾಗಿ ಬಂದಿತು. ಅಷ್ಟೊತ್ತಿಗೆ ಆಗಬೇಕಾದ ಅಪಾಯ ಆಗಿ ಹೋಗಿತ್ತು. ದಿಗ್ವಿಜಯ 6-4 ರಿಂದ 3ನೇ ಸೆಟ್‌ ಗೆಲ್ಲುವ ಮೂಲಕ ಅಂತಿಮ ಪಂದ್ಯ ಇಬ್ಬರೂ ಭಾರತೀಯ ನಡುವೆ ನಡೆಯುವದನ್ನು ಖಚಿತಪಡಿಸಿದರು.

ಇಂದು ಸಿಂಗಲ್ಸ್‌ ಫೈನಲ್‌

ಭಾನುವಾರ ಬೆಳಗ್ಗೆ 10ಕ್ಕೆ ಸಿಂಗಲ್ಸ್‌ ಅಂತಿಮ ಪಂದ್ಯ ಜರುಗಲಿದೆ. ಈ ಪಂದ್ಯದ ವಿಜೇತರು 3600 ಅಮೇರಿಕನ್ ಡಾಲರ್‌ ನಗದು ಬಹುಮಾನ ಪಡೆಯಲಿದ್ದರೆ, ರನ್ನರ್ಸ್‌ ಅಪ್‌ಗೆ 2120 ಅಮೇರಿಕನ್‌ ಡಾಲರ್‌ಗಳು ದೊರೆಯಲಿವೆ. ಸೆಮಿ ಫೈನಲ್‌ ತಲುಪಿದವರು 1255 ಡಾಲರ್‌, ಕ್ವಾರ್ಟರ್‌ ಫೈನಲ್‌ ತಲುಪಿದವರು 730 ಡಾಲರ್‌ ಹಾಗೂ ಪ್ರಿ-ಕ್ವಾರ್ಟರ್‌ ತಲುಪಿದವರು 430 ಡಾಲರ್‌ ಪಡೆಯುವರು.

ಅದೇ ರೀತಿ ಡಬಲ್ಸ್‌ನಲ್ಲಿ ಸೆಮಿ ಫೈನಲ್‌ ತಲುಪಿದವರು 540 ಡಾಲರ್‌, ಕ್ವಾರ್ಟರ್‌ ಫೈನಲಿಸ್ಟ್‌ಗಳು 320 ಡಾಲರ್‌ ಮತ್ತು ಪ್ರಿ-ಕ್ವಾರ್ಟರ್‌ ತಲುಪಿದವರು 180 ಡಾಲರ್‌ ಗಳಿಸುವರು ಎಂದು ಧಾರವಾಡ ಲಾನ್‌ ಟೆನಿಸ್‌ ಸಂಸ್ಥೆ ಪದಾಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಡಬಲ್ಸ್‌ ಫೈನಲ್‌

3ನೇ ಶ್ರೇಯಾಂಕಿತ ಜೋಡಿ ಪ್ರಜ್ವಲ್‌ ದೇವ ಮತ್ತು ನಿತಿನಕುಮಾರ ಸಿನ್ಹಾ ಡಬಲ್ಸ್‌ ಅಂತಿಮ ಪಂದ್ಯದಲ್ಲಿ ಶ್ರೇಯಾಂಕ ರಹಿತ ಜೋಡಿ ಸಾಯಿ ಕಾರ್ತಿಕ ರೆಡ್ಡಿಗಂಟಾ ಮತ್ತು ಮನಿಷ್‌ ಸುರೇಶಕುಮಾರ ಅವರನ್ನು 6-4, 6-3 ರಿಂದ ನೇರ ಸೆಟ್‌ಗಳಲ್ಲಿ ಪರಾಭವಗೊಳಿಸಿ 1500 ಅಮೇರಿಕನ್‌ ಡಾಲರ್‌ ನಗದು ಬಹುಮಾನ ಜೇಬಿಗಿಳಿದರು. ರೆಡ್ಡಿ ಮತ್ತು ಮನಿಷ್‌ 900 ಅಮೆರಿಕನ್‌ ಡಾಲರ್‌ಗಳಿಂದ ತೃಪ್ತಿಪಡಬೇಕಾಯಿತು.