ವರ್ಷ ಬಿಟ್ಟು ಮತ್ತೊಂದು ವರ್ಷ ಭರ್ಜರಿ ಫಸಲು ನೀಡುವ ಮಾವು ಬೆಳೆ : ಈ ಬಾರಿ ಉತ್ತಮ ಇಳುವರಿ ನಿರೀಕ್ಷೆ

| Published : Jan 09 2025, 12:48 AM IST / Updated: Jan 09 2025, 12:02 PM IST

ವರ್ಷ ಬಿಟ್ಟು ಮತ್ತೊಂದು ವರ್ಷ ಭರ್ಜರಿ ಫಸಲು ನೀಡುವ ಮಾವು ಬೆಳೆ : ಈ ಬಾರಿ ಉತ್ತಮ ಇಳುವರಿ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾವು ಒಂದು ವರ್ಷ ಬಿಟ್ಟು ಮತ್ತೊಂದು ವರ್ಷ ಭರ್ಜರಿ ಫಸಲು ನೀಡುವ ಬೆಳೆ. ಕಳೆದ ವರ್ಷ ಹವಾಮಾನ ವೈಪರೀತ್ಯದ ಕಾರಣ ಇಳುವರಿ ಕುಂಠಿತಗೊಂಡಿದ್ದರಿಂದ ಬೆಳೆಗಾರರು ನಷ್ಟ ಅನುಭವಿಸಿದ್ದರು.

ಎಂ.ಅಫ್ರೋಜ್ ಖಾನ್

ರಾಮನಗರ : ಚಿಗುರೆಲೆಗಳಿಂದ ಮೈದುಂಬಿಕೊಂಡು, ಬಂಗಾರ ಬಣ್ಣದ ಹೂವುಗಳಿಂದ ಸಿಂಗಾರಗೊಂಡಿರುವ ಮಾವಿನ ಮರಗಳು ಮಾವು ಬೆಳೆಗಾರರಲ್ಲಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿವೆ. 

ಈ ವರ್ಷ ಮೂರು ಹಂತಗಳಲ್ಲಿ ಮರಗಳಲ್ಲಿ ಹೂವು ಕಾಣಿಸಿಕೊಳ್ಳುತ್ತಿದೆ. ನವೆಂಬರ್‌ನಲ್ಲಿ ಹೂವು ಬಿಟ್ಟಿರುವ ಮರಗಳಲ್ಲಿ ಪಿಂದೆಗಳಾಗಿದ್ದು, ಈಗ ಕೆಲವೆಡೆ ಮರಗಳಲ್ಲಿ ಹೂವು ಬಿಟ್ಟಿದ್ದರೆ, ಬಹುತೇಕ ಕಡೆಗಳಲ್ಲಿ ಚಿಗುರು - ಹೂವು ಎರಡು ಕಾಣಿಸಿಕೊಂಡಿವೆ.ಮಾವು ಒಂದು ವರ್ಷ ಬಿಟ್ಟು ಮತ್ತೊಂದು ವರ್ಷ ಭರ್ಜರಿ ಫಸಲು ನೀಡುವ ಬೆಳೆ. 

ಕಳೆದ ವರ್ಷ ಹವಾಮಾನ ವೈಪರೀತ್ಯದ ಕಾರಣ ಇಳುವರಿ ಕುಂಠಿತಗೊಂಡಿದ್ದರಿಂದ ಬೆಳೆಗಾರರು ನಷ್ಟ ಅನುಭವಿಸಿದ್ದರು. ಸದ್ಯಕ್ಕೆ ಮಾವಿನ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದ ಹೂವು, ಹೂವಿನಷ್ಟೇ ಪ್ರಮಾಣದಲ್ಲಿ ಚಿಗುರೆಲೆಗಳೂ ತುಂಬಿಕೊಂಡಿವೆ.ಈಗಿರುವ ಚಳಿ ಪ್ರಮಾಣ ಉತ್ತಮ ಫ‌ಸಲು ನೀಡಲು ಪೂರಕವಾದಂತಿದೆ. ಕಳೆದ ವರ್ಷದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣ ಮಾವಿನ ಬೆಳೆ ಕೈ ಕೊಟ್ಟಿತ್ತು. 

ಹಾಗಾಗಿ, ರೈತರು ಈ ಬಾರಿಯಾದರೂ ಉತ್ತಮ ಮಳೆಯಾದರೆ ಉತ್ತಮ ಫ‌ಸಲಿನ ನಿರೀಕ್ಷೆಯಲ್ಲಿದ್ದಾರೆ. ಮಾವಿನ ಮರಗಳಲ್ಲಿ ಚಿಗುರುನಲ್ಲೂ ಹೂವು ಕಾಣಿಸಿಕೊಂಡಿದ್ದು, ಪಿಂದೆಯನ್ನು ಹಾಗೂ ಹೂವನ್ನು ಕಾಪಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಔಷಧಿ ಸಿಂಪಡಣೆ ಅನಿವಾರ್ಯ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾವು ಬೆಳೆಗಾರರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

2 ಬಾರಿ ಔಷಧಿ ಸಿಂಪಡಣೆ ಅಗತ್ಯ:

ಮೊದಲ ಸಿಂಪಡಣೆ:ಹೂ ಬಿಡುವ ಸಂದರ್ಭದಲ್ಲಿ ಮತ್ತು ಹೂ ತೆನೆ ಚಿಗುರೊಡೆಯುವ ಹಂತದಲ್ಲಿ ಹೂವಿಗೆ ಜಿಗಿಹುಳು, ಹೂತೆನೆ ಬುಡ ಕೊರಕ, ಥ್ರಿಪ್ಸ್, ನುಸಿ, ಬೂದಿರೋಗ, ಕಾಡಿಗೆ ರೋಗದ ಶೇಷ, ಚಿಬ್ಬು ರೋಗ, ಹಿಟ್ಟು ತಿಗಣೆ, ಓಟೆ ಕೊರಕ ಮುಂತಾದ ರೋಗಗಳಿಗೆ ಥೈಯೋಮೆಥೋಕ್ಸಾಮ್ ಹಾಗೂ ನೀರಿನಲ್ಲಿ ಕರಗುವ ಗಂಧಕ ಅಥವಾ ಇಮಿಡಾಕ್ಲೋಪ್ರಿಡ್ ಹಾಗೂ ನೀರಲ್ಲಿ ಕರಗುವ ಗಂಧಕ ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ ಹಾಗೂ ನೀರಲ್ಲಿ ಕರಗುವ ಗಂಧಕ ಅಥವಾ ಆಸಿಫೇಟ್ ಹಾಗೂ ನೀರಲ್ಲಿ ಕರಗುವ ಗಂಧಕ ಔಷಧಗಳನ್ನು ಸಿಂಪಡಣೆ ಮಾಡಬೇಕು.ಹೀಗೆ ಮಾಡುವುದರಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವ ಹಂತ ಕುಂಠಿತಗೊಂಡು ಇಳುವರಿಗೆ ಕಡಿಮೆಯಾಗುತ್ತದೆ. 

 ಮೊದಲ ಹಂತದ ಸಿಂಪಡಣೆಯಾದ 15-20 ದಿನಗಳ ನಂತರ ಎರಡನೇ ಸಿಂಪಡಣೆಯನ್ನು ಕೈಗೊಳ್ಳಬೇಕು ಅನ್ನೋದು ತಜ್ಞರು ಸಲಹೆ.ಎರಡನೇ ಸಿಂಪಡಣೆ: ಹೂ ತೆನೆ ಹೊರಡುವ ಹಾಗೂ ಹೂ ಅರಳುವ ಹಂತದಲ್ಲಿ ಜಿಗಿ ಹುಳು, ಥ್ರಿಪ್ಸ್, ಬೂದಿ ರೋಗ, ಹೂತೆನೆ ಒಣಗುವ ರೋಗ ಬರುವ ಸಾಧ್ಯತೆಯಿರುತ್ತದೆ. ರೋಗ ತಡೆಗಾಗಿ ಡೆಲ್ಟಾಮೆಥ್ರಿನ್ ಹಾಗೂ ಹೆಕ್ಸಕೊನಜೋಲ್ ಅಥವಾ ಬೂಪ್ರೊಪೆಜಿನ್ ಹಾಗೂ ಥಯೋಪನೈಟ್ ಮಿಥೈಲ್ ಅಥವಾ ಡಯಾಫೆಂತಿಯುರಾನ್ ಹಾಗೂ ಡೈಫೆಂಕೊನಜಾಲ್ ಅಥವಾ ಅಜಾದರ‍್ಯಾಕ್ಟಿನ್ ಹಾಗೂ ಡೈಫೆಂಕೊನಜಾಲ್ ಅಥವಾ ಮೆಲಾಥಿಯಾನ್ ಹಾಗೂ ಹೈಕ್ಸಕೊನಜೋಲ್ ಅಥವಾ ಇಂಡಾಕ್ಸಕಾರ್ಬ್ ಹಾಗೂ ಟೆಬೂಕೋನಜಾಲ್ ಅಥವಾ ಬೂಪ್ರೊಪೆಜಿನ್ ಹಾಗೂ ಟ್ರೆಫ್ಲಾಕ್ಸಿಸ್ಟೊಬಿನ್‌ ಮೊದಲಾಲದವುಗಳನ್ನು ಇಲಾಖೆ ಅಧಿಕಾರಿಗಳು ಸೂಚಿಸುವ ಹಾಗೆ ಸಿಂಪಡಣೆ ಮಾಡಬೇಕಾಗುತ್ತದೆ. 

ಅಗತ್ಯವಿದ್ದಲ್ಲಿ ಮಾತ್ರ ಸಿಂಪರಣೆ ಮಾಡಬೇಕು.ಈ ಎರಡು ಹಂತದಲ್ಲಿ ಪ್ರತಿ ಲೀಟರ್ ಸಿಂಪರಣಾ ದ್ರಾವಣಗಳಿಗೆ 0.5 ಮಿ.ಲೀ ಶಾಂಪೂ ಅಥವಾ ಅಂಟನ್ನು ಬೆರೆಸಿ ಸಿಂಪಡಿಸಬೇಕು. ಇದರಿಂದ ಸಿಂಪಡಿಸಿದ ದ್ರಾವಣ ಎಲೆ ಹೂಗಳಿಗೆ ಚೆನ್ನಾಗಿ ಅಂಟಿಕೊಳ್ಳುತ್ತದೆ ಎಂದು ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ. ತೋಟಗಾರಿಕಾ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಸಿಂಪಡಣೆ ಕ್ರಮಗಳನ್ನು ಅನುಸರಿಸಿದರೆ, ರೈತರು ಉತ್ತಮ ಫಸಲು ಪಡೆಯಲು ಸಾಧ್ಯ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಾಜು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು

 ಮಾವು ಬೆಳೆಗಾರರು ಕೈಗೊಳ್ಳಬೇಕಾದ ಇತರ ಮುಂಜಾಗ್ರತಾ ಕ್ರಮಗಳು :ಹೂ ಬಿಟ್ಟಾಗ, ಪರಾಗ ಸ್ಪರ್ಷದ ಸಮಯದಲ್ಲಿ ಗಂಧಕ ಸಿಂಪಡಿಸುವುದರಿಂದ ಸ್ಪರ್ಷ ಕ್ರಿಯೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂ, ಎಳೆಯ ಕಚ್ಚಿದ ಕಾಯಿಗೆ ಹಾನಿಯಾಗುತ್ತದೆ.ಪರಾಗ ಸ್ಪರ್ಷ ವೇಳೆ ಗಿಡಗಳಿಗೆ ನೀರುಣಿಸಬಾರದು. ಕಾಯಿ ಬಟಾಣಿಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬೇಕು. 

ಎರಡು ಮೂರು ಬಾರಿ ಪೂರಕ ನೀರಾವರಿ ಕೊಡುವುದು ಉತ್ತಮ.ಕಾಯಿ ಕಚ್ಚಲು ಆರಂಭಿಸಿದ ನಂತರ ಕಾಯಿ ಉದುರದಂತೆ ನೋಡಿಕೊಳ್ಳಬೇಕು.ಚಿಕ್ಕಕಾಯಿಗಳು ಬೆಳೆಯುವ ಹಂತದಲ್ಲಿ ಐಎಚ್‌ಆರ್‌ಸಿ ಹೊರತಂದ ಮ್ಯಾಂಗೋ ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ 50 ಗ್ರಾಂನಷ್ಟು ಕರಗಿಸಿ ಸಿಂಪಡಿಸುವುದು. ಪೊಟ್ಯಾಸ್ಸಿಯಂ ನೈಟ್ರೆಟ್ ಸಿಂಪಡಣೆಯಿಂದ ಮೊಗ್ಗು ಅರಳಲು ಮತ್ತು ಏಕರೂಪದ ಹೂ ಬಿಡುವಿಕೆಯನ್ನು ಹೆಚ್ಚಿಸುತ್ತದೆ.ಕೈಗೆಟುಕುವ ಹಂತದ ಸಣ್ಣ ಕಾಯಿಗಳಿಗೆ ಪೇಪರ್ ಕವರ್ ಹೊದಿಕೆ ಅಳವಡಿದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು. ನೇರ ಮಾರುಕಟ್ಟೆ ಸಂಪರ್ಕ ಹೊಂದಿದ ಬೆಳೆಗಾರರಿಗೆ ಇದು ಉತ್ತಮ ಕ್ರಮವಾಗಿದೆ.....

 ಬೆಳೆಯ ವಿಸ್ತೀರ್ಣ ತಾಲೂಕು ವಿಸ್ತೀರ್ಣ (ಹೆಕ್ಟೇರ್ )

ರಾಮನಗರ 12148.52

ಚನ್ನಪಟ್ಟಣ 6483.9

ಮಾಗಡಿ 7899.37

ಕನಕಪುರ 5104.61

ಹಾರೋಹಳ್ಳಿ 920.31

 ಒಟ್ಟು 32,556.72