ಸಾರಾಂಶ
ಹಾವೇರಿ: ಶ್ರೀರಾಮನವಮಿ ಅಂಗವಾಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ರಾಮ ಮಂದಿರಗಳಲ್ಲಿ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ಸಂಭ್ರಮದಿಂದ ಜರುಗಿದವು. ಜೈ ಶ್ರೀರಾಮ ಘೋಷಣೆಗಳು ಅನುರಣಿಸಿದವು.ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಗರದ ದೇಸಾಯಿಗಲ್ಲಿಯಲ್ಲಿರುವ ಶ್ರೀ ರಾಮದೇವರ ದೇವಸ್ಥಾನದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಈ ಬಾರಿಯೂ ರಾಮನವಮಿ ಆಚರಿಸಲಾಯಿತು. ಬೆಳಗ್ಗೆ 6 ಗಂಟೆಗೆ ಕಾಕಡಾರತಿ ಪೂಜೆ ಜರುಗಿತು. ಬೆಳಗ್ಗೆ 7.30ಕ್ಕೆ ಪುಷ್ಪಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಬಳಿಕ ಮಧ್ಯಾಹ್ನ 12.30 ಮಲ್ಲಿಗೆ, ಸೇವಂತಿಗೆ, ಸುಗಂಧ, ದಾಸವಾಳ, ಚಂಪಕ, ಗುಲಾಬಿ ಸೇರಿದಂತೆ ತರಹೇವಾರಿ ಹೂವುಗಳಿಂದ ಹಾಗೂ ಮಾವಿನ ತಳಿರು- ತೋರಣಗಳಿಂದ ಅಲಂಕಾರ, ವಸ್ತ್ರಾಲಂಕಾರ ಸೇವೆಯನ್ನು ಮಾಡಲಾಯಿತು. ಸರಿಯಾಗಿ ಮಧ್ಯಾಹ್ನ 12.40ಕ್ಕೆ ಶ್ರೀರಾಮನ ಜನ್ಮೋತ್ಸವ ನಿಮಿತ್ತ ತೋಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಬಳಿಕ ರಾಮದೇವ ದೇವಸ್ಥಾನದ ಆವರಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸಡಗರ, ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಜರುಗಿಸಲಾಯಿತು.ತೊಟ್ಟಿಲೋತ್ಸವ ಸಂದರ್ಭದಲ್ಲಿ ರಾಮ ಜನ್ಮ ಕುರಿತ ಸ್ತುತಿಗಳನ್ನು ಭಕ್ತರು ಪ್ರಸ್ತುತ ಪಡಿಸಿದರು. ಪಲ್ಲಕ್ಕಿ ಸೇವೆ ಸಮಯದಲ್ಲಿ ರಾಮ ಜಯ ರಾಮ, ಜಯ ಜಯ ರಾಮ ಎಂಬ ಘೋಷಣೆಗಳು ಮೊಳಗಿದವು. ಪಾನಕ, ಕೋಸಂಬರಿ ವಿತರಣೆ: ರಾಮನವಮಿ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಕೋಸಂಬರಿ ಹಾಗೂ ಪಾನಕವನ್ನು ವಿತರಿಸಲಾಯಿತು. ದಿನವಿಡೀ ಉಪವಾಸ ವ್ರತ ಆಚರಣೆ ಮಾಡುವ ಭಕ್ತಾದಿಗಳಿಗೆ ಮಧ್ಯಾಹ್ನ 1.30ಕ್ಕೆ ಅವಲಕ್ಕಿ ಮೊಸರನ್ನು ವಿತರಿಸಲಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು ಶ್ರೀರಾಮನ ದರ್ಶನವನ್ನು ಪಡೆದುಕೊಂಡು ಪುನೀತರಾದರು.ಈ ಸಂದರ್ಭದಲ್ಲಿ ಫಂಡರಾಪುರದ ಪ್ರಸಾದ ಮಹಾರಾಜ ಬಡವೆ ಶ್ರೀಗಳು, ದೇವಸ್ಥಾನದ ಧರ್ಮದರ್ಶಿ ಹನುಮಂತನಾಯಕ್ ಬದಾಮಿ, ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ವಸಂತ ಮೊಕ್ತಾಲಿ, ರಮೇಶ ಕಡಕೋಳ, ದತ್ತಾತ್ರೇಯ ಕಳ್ಳಿಹಾಳ, ಉದಯ ಕುಲಕರ್ಣಿ, ಉಮೇಶ ಕಳ್ಳಿಹಾಳ, ರಾಜಣ್ಣ ಪುಣ್ಯವಂತರ, ಉಮೇಶ ಕುಲಕರ್ಣಿ, ರಮೇಶ ಕುಲಕರ್ಣಿ ಸೇರಿದಂತೆ ಸರ್ವಜನಾಂಗದ ಭಕ್ತರು ಪಾಲ್ಗೊಂಡಿದ್ದರು.ಸಂಭ್ರಮದ ರಾಮನವಮಿ, ಪಾನಕ ವಿತರಣೆರಾಣಿಬೆನ್ನೂರು: ಮರ್ಯಾದಾ ಪುರುಷೋತ್ತಮ ಶ್ರೀರಾಮ ಜಯಂತಿಯನ್ನು ಭಾನುವಾರ ನಗರದ ವಿವಿಧ ಕಡೆ ವಿಜೃಂಭಣೆಯಿಂದ ಆಚರಿಸಲಾಯಿತು.ಇಲ್ಲಿನ ಸಂಗಮ ಟಾಕೀಸ್ ಬಳಿಯ ಮೆಹರವಾಡೆ ಕುಟುಂಬದ ಶ್ರೀರಾಮ ದೇವರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ತೊಟ್ಟಿಲು ಕಟ್ಟಿ ಹೂವುಗಳಿಂದ ಅಲಂಕರಿಸಿ ಅದರಲ್ಲಿ ಶ್ರೀರಾಮನ ಪ್ರತೀಕವಾಗಿ ತೆಂಗಿನಕಾಯಿಯನ್ನು ಇಡಲಾಗಿತ್ತು. ಮಧ್ಯಾಹ್ನ 12ರ ಸಮಯದಲ್ಲಿ ಸುಮಂಗಲಿಯರು ತೊಟ್ಟಿಲು ತೂಗುವ ಮೂಲಕ ಹೆಸರಿಡುವ ಶಾಸ್ತ್ರ ಮಾಡಿ ಪಾಲಕಿ ಉತ್ಸವ ನಡೆಸಲಾಯಿತು.ಇದಲ್ಲದೆ ಮಾರುತಿನಗರದ ಶ್ರೀರಾಮ ಮಂದಿರ, ಕೋಟೆ ಪ್ರದೇಶದ ರಾಮದೇವರ ಗುಡಿ, ತುಳಜಾ ಭವಾನಿ ದೇವಸ್ಥಾನ, ಅಶ್ವಥ ಮಾರುತಿ ದೇವಸ್ಥಾನ, ಕೆಇಬಿ ವಿನಾಯಕ ದೇವಸ್ಥಾನ, ವಿನಾಯಕನಗರದ ವಿನಾಯಕ ದೇವಸ್ಥಾನಗಳಲ್ಲಿಯೂ ಶ್ರೀರಾಮ ಜಯಂತಿಯನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಎಲ್ಲ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು.