ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ದೇಶದಲ್ಲಿ ಅಡುಗೆ ಅನಿಲ ಸರಿಯಾಗಿ ಪೂರೈಕೆಯಾಗದ ವಾತಾವರಣ ಸೃಷ್ಟಿಯಾಗಿದೆ. ಬೆಲೆಯೂ ತೀವ್ರ ಏರಿಕೆಯಾಗಿದೆ. ಕೇಂದ್ರದ ಬಾಲಿಶ ವಿದೇಶಾಂಗ ನೀತಿಯೇ ಇದಕ್ಕೆ ಕಾರಣ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ಮಂಗಳೂರು: ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ದೇಶದಲ್ಲಿ ಅಡುಗೆ ಅನಿಲ ಸರಿಯಾಗಿ ಪೂರೈಕೆಯಾಗದ ವಾತಾವರಣ ಸೃಷ್ಟಿಯಾಗಿದೆ. ಬೆಲೆಯೂ ತೀವ್ರ ಏರಿಕೆಯಾಗಿದೆ. ಕೇಂದ್ರದ ಬಾಲಿಶ ವಿದೇಶಾಂಗ ನೀತಿಯೇ ಇದಕ್ಕೆ ಕಾರಣ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.ಅಡುಗೆ ಅನಿಲ ಬೆಲೆ ಏರಿಕೆ, ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದ ಕದ್ರಿ ಸರ್ಕಲ್‌ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನ ಸ್ಥಿತಿ ತಲುಪಿದೆ. ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಆದರೂ ಬಿಜೆಪಿಯವರು ಜನರಿಗೆ ಸುಳ್ಳು ಹೇಳುತ್ತಾ ತಪ್ಪು ದಾರಿಗೆ ತಳ್ಳುತಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ನಿರಂತರ ಬೆಲೆ ಏರಿಕೆಯಾಗುತ್ತಿದ್ದರೂ ದೇಶದ ಪ್ರಧಾನಮಂತ್ರಿ ಸುಳ್ಳುಗಳನ್ನು ಹೇಳುತ್ತಾ ಜನರನ್ನು ನಂಬಿಸುತ್ತಿದ್ದಾರೆ. ಪ್ರತಿ ಸಂದರ್ಭವೂ ಜನರಿಗೆ ಮೋಸ ಮಾಡುತ್ತಾ ಬರುತ್ತಿರುವ ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರು ಅರಿತುಕೊಳ್ಳಬೇಕು ಎಂದು ರಮಾನಾಥ ರೈ ಹೇಳಿದರು.ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿ, ವಾಣಿಜ್ಯ ಉದ್ದೇಶದ ಅಡುಗೆ ಅನಿಲ ಬೆಲೆ ಕಾಳಸಂತೆಯಲ್ಲಿ ನಾಲ್ಕೈದು ಸಾವಿರ ರು.ಗೆ ಏರಿದೆ. ಇದರ ಪರಿಣಾಮ ಹೊಟೇಲ್‌ಗಳಲ್ಲಿ ತಿಂಡಿ- ಊಟದ ದರ ಏರಿಕೆಯಾಗಿದೆ. ಆಟೋಗಳಿಗೆ ಎಲ್‌ಪಿಜಿ ಸಿಗದೆ ಚಾಲಕರು ಮನೆಯಲ್ಲಿ ಕೂರುವಂತಾಗಿದೆ. ಜನರು ಇಷ್ಟೆಲ್ಲ ಸಂಕಷ್ಟಪಡುತ್ತಿರುವಾಗ ದೇಶ ಆಳುವವರಿಗೆ ನಾಚಿಕೆ ಆಗಲ್ವಾ? ಇದಕ್ಕೆಲ್ಲ ಬಿಜೆಪಿ, ಕೇಂದ್ರ ಸರ್ಕಾರವೇ ಕಾರಣ. ನರೇಂದ್ರ ಮೋದಿ ಅವರು ಅತ್ಯಂತ ದುರ್ಬಲ ಪ್ರಧಾನಿ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಅಭಿನಂದನ್‌ ಹರೀಶ್‌, ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷರಾದ ಬಶೀರ್, ಸುನೀತ್‌ ದೇಸಾಯಿ, ಮುಖಂಡರಾದ ಫಾರೂಕ್‌ ಪೆರ್ನೆ, ಆಸೀಫ್‌ ಬಜಾಲ್, ಸಮರ್ಥ್‌ ಭಟ್‌, ಪೃಥ್ವಿರಾಜ್‌, ವೆಲ್ವಿನ್‌, ಚೇತನ್‌, ಮಹೇಶ್‌, ಪ್ರಜ್ವಲ್‌ ಮತ್ತಿತರರು ಇದ್ದರು.

--------------ಖಾಲಿ ಸಿಲಿಂಡರ್‌ ಅಣಕು ‘ಶವ ಯಾತ್ರೆ’!

ಖಾಲಿ ಗ್ಯಾಸ್‌ ಸಿಲಿಂಡರ್‌ಗೆ ಹೂಮಾಲೆ ಹಾಕಿ ಅದನ್ನು ಚಟ್ಟದ ಮೇಲೆ ಕಟ್ಟಿ ಕಾಂಗ್ರೆಸ್‌ ಕಾರ್ಯಕರ್ತರು ಹೊತ್ತುಕೊಂಡು ಕದ್ರಿ ಸರ್ಕಲ್ ಸುತ್ತ ಅಣಕು ಶವಯಾತ್ರೆ ನಡೆಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಗ್ಯಾಸ್‌ ಸ್ಟೌ ಮತ್ತು ಖಾಲಿ ಪಾತ್ರೆ ಗಮನ ಸೆಳೆಯಿತು.