ಸಿ ರೋಡಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ನಡೆದ ಬಿ. ರಮಾನಾಥ ರೈ ಅವರ 75ನೇ ಹುಟ್ಟುಹಬ್ಬ ಆಚರಣಾ ಸಮಿತಿಯ ವತಿಯಿಂದ ನಡೆದ ಲಾಂಛನ ಬಿಡುಗಡೆ ಹಾಗೂ ಸರಣಿ ಕಾರ್ಯಕ್ರಮಗಳಿಗೆ ಚಾಲನೆ
ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈ ಅವರು ದೇವರಾಜ ಅರಸು ಅವರಂತಹ ಸಮಾಜಮುಖಿ ವ್ಯಕ್ತಿತ್ವದ ಗುಣಗಳನ್ನು ತಮ್ಮೊಳಗೆ ಅಳವಡಿಸಿಕೊಂಡಿದ್ದು, ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ಎಲ್ಲರೂ ಒಟ್ಟಾಗಿ ಅವರ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಅವರಿಗೆ ಸಲ್ಲಿಸುವ ಅತ್ಯುತ್ತಮ ಗೌರವವಾಗಿದೆ ಎಂದು ಪ್ರೊ. ತುಕಾರಾಮ್ ಪೂಜಾರಿ ಹೇಳಿದರು.
ಬಿಸಿ ರೋಡಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ನಡೆದ ಬಿ. ರಮಾನಾಥ ರೈ ಅವರ 75ನೇ ಹುಟ್ಟುಹಬ್ಬ ಆಚರಣಾ ಸಮಿತಿಯ ವತಿಯಿಂದ ನಡೆದ ಲಾಂಛನ ಬಿಡುಗಡೆ ಹಾಗೂ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜದ ವಿವಿಧ ವರ್ಗಗಳ ಜನರ ಪರವಾಗಿ ಸ್ಪಂದಿಸುತ್ತಾ ಬಂದಿರುವ ರಮಾನಾಥ ರೈ ಅವರ ಸಮಾಜಮುಖಿ ಸೇವೆ ಗಮನಾರ್ಹವಾಗಿದೆ. ಅವರ ವ್ಯಕ್ತಿತ್ವ ಮತ್ತು ಸೇವೆಯನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಈ ಹುಟ್ಟುಹಬ್ಬ ಆಚರಣೆಯನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಪ್ರಸ್ತಾವನೆಗೈದ ಹುಟ್ಟುಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಬಿ. ರಮಾನಾಥ ರೈ ಅವರ ಸಾಮಾಜಿಕ ಸೇವೆ ಅತ್ಯಂತ ಮಹತ್ವದ್ದಾಗಿದೆ. ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಮಿತಿಯ ಮೂಲಕ ಅವರ 75ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿವೇತನ: ಹುಟ್ಟುಹಬ್ಬದ ಅಂಗವಾಗಿ 75 ಮಕ್ಕಳಿಗೆ ವಿದ್ಯಾರ್ಥಿವೇತನ, ವಿಶೇಷ ಚೇತನ ಮಕ್ಕಳಿಗೆ ಪೂರಕ ವ್ಯವಸ್ಥೆ, 75 ಗಿಡಗಳ ನೆಡುವ ಕಾರ್ಯಕ್ರಮ, ಆತ್ಮಚರಿತ್ರೆ ಬಿಡುಗಡೆ ಹಾಗೂ ಬೃಹತ್ ಆರೋಗ್ಯ ಮೇಳ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದರು.ಬಳಿಕ ಮಾತನಾಡಿದ ಬಿ. ರಮಾನಾಥ ರೈ, ತಮ್ಮ ಮೇಲೆ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನಕ್ಕೆ ತಾವು ಸದಾ ಋಣಿಯಾಗಿರುವುದಾಗಿ ಹೇಳಿದರು. ‘ನನ್ನ ಮೇಲೆ ನೀವು ಇಟ್ಟಿರುವ ಅಭಿಮಾನಕ್ಕೆ ನಾನು ಎಂದಿಗೂ ನಿಮಗೆ ಋಣಿಯಾಗಿದ್ದೇನೆ’ ಎಂದು ತಿಳಿಸಿದರು.
ರೆ. ಫಾದರ್ ವಿಕ್ಟರ್ ಡಿಸೋಜಾ, ಎಂ.ಎಸ್. ಮಹಮ್ಮದ್, ಅಶ್ವನಿಕುಮಾರ್ ರೈ, ಕಾರ್ಯಾಧ್ಯಕ್ಷರು, ಪದ್ಮಶೇಖರ್ ಜೈನ್, ಗೇರು ಅಭಿವೃದ್ಧಿ ನಿಗಮದ ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಲಾವಣ್ಯ ಬಲ್ಲಾಳ್, ಮಲ್ಲಿಕಾ ಪಕ್ಕಳ, ಚಂದ್ರಶೇಖರ ಭಂಡಾರಿ, ಅಬ್ಬಾಸ್ ಅಲಿ, ಬಾಲಕೃಷ್ಣ ಅಂಚನ್, ಸುದೀಪ್ ಕುಮಾರ್ ಶೆಟ್ಟಿ, ಬೇಬಿಕುಂದರ್, ಮುಸ್ತಫಾ, ಹೈಡಾ ಸುರೇಶ್, ಲವೀನಾ ಮೋರಸ್, ಜಯಂತಿ ಪೂಜಾರಿ, ಶಾಹುಲ್ ಹಮೀದ್ ಹಾಗೂ ಉಮಾನಾಥ ಶೆಟ್ಟಿ ಉಪಸ್ಥಿತರಿದ್ದರು.ಸಮಿತಿ ಸಂಚಾಲಕ ಪಿಯುಸ್ ಎಲ್. ರೋಡ್ರಿಗಸ್ ಸ್ವಾಗತಿಸಿದರು. ಬೇಬಿಕುಂದರ್ ವಂದಿಸಿದರು. ಬಾಲಕೃಷ್ಣ ಆಳ್ವ ನಿರೂಪಿಸಿದರು.