ಸಾರಾಂಶ
ಮನೆ ಮನೆಗೂ ಗಂಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ನಿಯಮಾನುಸಾರ ಕಾಮಗಾರಿ ಮಾಡದೆ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತರು, ವಿವಿಧ ಸಂಘಟನೆಗಳ ಕಾರ್‍ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮನೆ ಮನೆಗೂ ಗಂಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ನಿಯಮಾನುಸಾರ ಕಾಮಗಾರಿ ಮಾಡದೆ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತರು, ವಿವಿಧ ಸಂಘಟನೆಗಳ ಕಾರ್‍ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು.ನಗರದ ಜಿಪಂ ಕಚೇರಿ ಮುಂದ ಧರಣಿ ನಡೆಸಿದ ಕಾರ್‍ಯಕರ್ತರು, ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು ನಂತರ ಜಿಲ್ಲಾ ಪಂಚಾಯ್ತಿ ಸಿಇಒ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನೆ ಮನೆಗೂ ಗಂಗೆ (ಜಲಜೀವನ್ ಮಿಷನ್) ಯೋಜನೆಯಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸುತ್ತಿರುವುದು ಸರಿಯಷ್ಟೆ. ಆದರೆ, ಮಂಡ್ಯ ಜಿಲ್ಲೆಯಾದ್ಯಂತ ಈಗಾಗಲೇ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇದ್ದು, ತೊಂಬೆ ನಲ್ಲಿ, ಕೊಳವೆ ಬಾವಿಗಳ ಮೂಲಕ ನೀರಿನ ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ವಾಟರ್ ಮ್ಯಾನ್ ಅವರನ್ನು ನೇಮಿಸಿ ಅದರ ನಿರ್ವಹಣೆ ಮಾಡುತ್ತಿರುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಕಾಮಗಾರಿ ಅನುಷ್ಠಾನಗೊಳಿಸುತ್ತಿರುವ ಪಿಡಿಒ ಮತ್ತು ಅಧ್ಯಕ್ಷರು, ಸಹಾಯಕ ಕಾರ್‍ಯಪಾಲಕ ಅಭಿಯಂತರರು, ಜಿಲ್ಲಾ ಪಂಚಾಯ್ತಿ ಕಾರ್‍ಯಪಾಲಕ ಅಭಿಯಂತರರು, ಸಿಇಒ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುತ್ತಿದ್ದು, ನೂರಾರು ಕೋಟಿ ರು. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಏನಾದರೂ ವ್ಯತ್ಯಾಸಗಳಾದಲ್ಲಿ, ನಷ್ಟಗಳಾದಲ್ಲಿ, ಆ ನಷ್ಟಗಳಿಗೆ ನಾವೇ ಸಂಪೂರ್ಣ ಹೊಣೆಗಾರರಾಗಿದ್ದು, ಮರು ಪಾವತಿ ಮಾಡಲು ಹಾಗೂ ಈ ಸಂಬಂಧ ತೆಗೆದುಕೊಳ್ಳಲಾಗುವ ಶಿಸ್ತು ಕ್ರಮಕ್ಕೆ ಬದ್ಧರಾಗಿರುತ್ತೇವೆ ಎಂದು ದೃಢೀಕರಿಸುವ ಹಾಗೆ ಅವರುಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸಮಗ್ರವಾಗಿ ತನಿಖೆ ಮಾಡಿ ಕಾಮಗಾರಿಗೆ ಅನುಮೋದಿಸಿರುವ ಅಧಿಕಾರಿಗಳು ಮತ್ತು ಖಾಸಗಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಎಲ್ಲಿ ಅವಶ್ಯಕತೆ ಇರುತ್ತದೋ ಅಂತಹ ಗ್ರಾಮಗಳಿಗೆ ಈ ಯೋಜನೆಯ ಪ್ರಯೋಜನವಾಗಲು ಅನುವು ಮಾಡಿಕೊಡಬೇಕು ಮತ್ತು ಅಲ್ಲಿಯವರೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಜವರೇಗೌಡ, ಶಿವರಾಮೇಗೌಡ, ಕೆ.ಆರ್. ರವೀಂದ್ರ, ಬಿ.ಟಿ. ವಿಶ್ವನಾಥ್, ಮಮತಾ, ಎಚ್.ಡಿ. ಜಯರಾಮು, ಅಣ್ಣಯ್ಯ, ಆನಂದಕುಮಾರ್, ವೆಂಕಟಗಿರಿಯಯ್ಯ, ಜಯರಾಮು ಗಾಣದಾಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.