ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಇತ್ತೀಚೆಗೆ ಜಂಟಿಯಾಗಿ ದಂಡ ಪ್ರಯೋಗ ನಡೆಸಿದ್ದಾರೆ.
ಶಿರಹಟ್ಟಿ: ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರ ಆರೋಗ್ಯ ಮತ್ತು ಜೀವಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಹಾಗೂ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಅಭಾವವನ್ನು ದುರುಪಯೋಗಪಡಿಸಿಕೊಂಡು ಅನೇಕ ನಕಲಿ ವೈದ್ಯರು ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ.ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಇತ್ತೀಚೆಗೆ ಜಂಟಿಯಾಗಿ ದಂಡ ಪ್ರಯೋಗ ನಡೆಸಿದ್ದಾರೆ. ಪರವಾನಗಿ ಇಲ್ಲದೆ ವೈದ್ಯಕೀಯ ಸೇವೆ ನೀಡುತ್ತಿದ್ದ ಹಾಗೂ ಅನಧಿಕೃತವಾಗಿ ಔಷಧ ವಿತರಣೆ ಮಾಡುತ್ತಿದ್ದವರ ವಿರುದ್ಧ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಯಿತು.ಜಿಲ್ಲಾಡಳಿತದ ನಿರ್ದೇಶನದಂತೆ ಶಿರಹಟ್ಟಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರು ಅಮಾಯಕ ಸಾರ್ವಜನಿಕರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿರುವ ಪ್ರಸಂಗಗಳು ಕಂಡುಬರುತ್ತಿವೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನೋಟಿಸ್ ನೀಡಿ ದಂಡ ಪ್ರಯೋಗ ಮಾಡುತ್ತಿದ್ದಾರೆ.ನಕಲಿ ವೈದ್ಯರು ಜ್ವರ, ಕೆಮ್ಮು, ಹೊಟ್ಟೆನೋವು, ಗಾಯಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಿ ಅಗತ್ಯವಿಲ್ಲದ ಔಷಧಿ ಮತ್ತು ಇಂಜೆಕ್ಷನ್‌ಗಳನ್ನು ನೀಡುತ್ತಿದ್ದಾರೆ. ಇದರಿಂದ ಹಲವಾರು ರೋಗಿಗಳ ಆರೋಗ್ಯ ಹದಗೆಡುವುದು, ಕೆಲವೊಮ್ಮೆ ಜೀವಹಾನಿ ಸಂಭವಿಸುವ ಅಪಾಯವಿದೆ. ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ವೈದ್ಯರ ಕೊರತೆ ಇರುವುದರಿಂದ ನಕಲಿ ವೈದ್ಯರ ಹಾವಳಿ ಹೆಚ್ಚಾಗಲು ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.ವೈದ್ಯಕೀಯ ಅರ್ಹತೆ ಹೊಂದಿದ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯಬೇಕು. ಯಾವುದೇ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ವೈದ್ಯರ ನೋಂದಣಿ ಮತ್ತು ಅರ್ಹತೆ ಇರುವುದನ್ನು ಸಾರ್ವಜನಿಕರು ಖಚಿತಪಡಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.ಸಾರ್ವಜನಿಕರ ಆಗ್ರಹ: ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ವಿಶೇಷ ದಾಳಿ ನಡೆಸಬೇಕು. ಅನಧಿಕೃತ ಕ್ಲಿನಿಕ್‌ಗಳನ್ನು ತಕ್ಷಣ ಮುಚ್ಚಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ಒದಗಿಸಬೇಕು. ಗ್ರಾಮ ಮಟ್ಟದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಕಲಿ ವೈದ್ಯರ ಬಗ್ಗೆ ದೂರು ನೀಡಲು ಸಹಾಯವಾಣಿ ಮತ್ತು ತ್ವರಿತ ಕ್ರಮದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಲ್ಲ ಕಡೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕುಸಲಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಬೀಗ ಜಡಿದು ನಕಲಿ ವೈದ್ಯ ಪರಾರಿಯಾಗಿದ್ದಾನೆ. ಆದ್ರಳ್ಳಿಯಲ್ಲಿ ರೇಡ್ ಮಾಡಿ ₹೫೦ ಸಾವಿರ ದಂಡ ವಿಧಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ತಿಳಿಸಿದರು.