ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕಾಂಗ್ರೆಸ್ ಪಕ್ಷದ ರಾಷ್ಟ್ರ, ರಾಜ್ಯ ನಾಯಕರು ಅಯೋಧ್ಯೆಯಿಂದ ದೂರ ಉಳಿದಿದ್ದರೂ, ಕರಾವಳಿಯ ಕಾಂಗ್ರೆಸ್ ನಾಯಕರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ, ಅಲ್ಲದೆ ಭಕ್ತಿಯಿಂದ ಬಾಲರಾಮನ ಮಂಡಲೋತ್ಸವದ ಸೇವೆಯಲ್ಲಿಯೂ ಭಾಗಿಯಾಗುತ್ತಿದ್ದಾರೆ.ಉಡುಪಿಯ ಹಿರಿಯ ಲೋಕೋಪಯೋಗಿ ಗುತ್ತಿಗೆದಾರರೂ, ಸಮಾಜಸೇವಕರೂ ಆಗಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಗುರುವಾರ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ರಜತ ಕಲಶಾಭಿಷೇಕದ ಸೇವೆ ನೀಡಿ, ಆ ಪ್ರಯುಕ್ತ ನಡೆದ ಹೋಮ ಹವನಗಳಲ್ಲಿ ವಿಧಿಪೂರ್ವಕ ಸಂಕಲ್ಪ ನೆರವೇರಿಸಿದರು. ನಂತರ ರಾಮ ದೇವರಿಗೆ ಕಲಶಾಭಿಷೇಕ, ಮಂಗಳಾರತಿಯಲ್ಲಿಯೂ ಭಾಗವಹಿಸಿ, ಬಾಲರಾಮನಿಗೆ ಅಭಿಷೇಕ ಮಾಡಿದ ರಜತ ಕಲಶವನ್ನು ಶ್ರೀಗಳಿಂದ ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಪ್ರಸಿದ್ಧ ನ್ಯಾಯವಾದಿ ಪೆಲತ್ತೂರು ಉಮೇಶ ಶೆಟ್ಟಿ, ಶ್ರೀಗಳ ಸಹಾಯಕರಾದ ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣು ಅಚಾರ್ಯ, ಕೃಷ್ಣ ಭಟ್ ಮೊದಲಾದವರಿದ್ದರು.ಎರಡು ದಿನಗಳ ಹಿಂದೆ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರೂ ಪತ್ನಿ ಸಮೇತರಾಗಿ ಅಯೋಧ್ಯೆಗೆ ತೆರಳಿ ರಾಮದೇವರಿಗೆ ರಜತ ಕಲಶಾಭಿಷೇಕ ಸೇವೆ ನೀಡಿದ್ದರು. ಸಂಜೆ ತೊಟ್ಟಿಲು ಉತ್ಸವದ ಸಂದರ್ಭದಲ್ಲಿ ಶ್ರದ್ಧಾಭಕ್ತಿಯಿಂದ ಚಾಮರ ಬೀಸುವ ಸೇವೆಯನ್ನೂ ಸಲ್ಲಿಸಿದ್ದರು.