ಸಾರಾಂಶ
ದೆಹಲಿಯಲ್ಲಿ ರಾಮುಲು ಹಾಗೂ ಸುಧಾಕರ್ ಜೆಪಿ ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರಾಜಕೀಯ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಅಮಿತ್ ಶಾ ಜತೆಗೂ ರಾಮುಲು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ದೆಹಲಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಬಿ. ಶ್ರೀರಾಮುಲು ಅವರು ಪ್ರತ್ಯೇಕವಾಗಿ ಭೇಟಿ ಮಾಡಿದರು.ರಾಷ್ಟ್ರೀಯ ಅಧ್ಯಕ್ಷರಾಗಿ ನಾಲ್ಕು ವರ್ಷ ಪೂರೈಸಿರುವ ಹಿನ್ನೆಲೆ ಜೆ.ಪಿ.ನಡ್ಡಾರನ್ನು ಡಾ.ಕೆ.ಸುಧಾಕರ್ ಅಭಿನಂದಿಸಿ, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರೆ, ಶ್ರೀರಾಮುಲು ಅವರು ಸೌಹಾರ್ದಯುತವಾಗಿ ಭೇಟಿಯಾಗಿ ಪ್ರಸಕ್ತ ರಾಜಕೀಯ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಮುಲು ಅವರು ಜನಾರ್ದನ ರೆಡ್ಡಿಯವರನ್ನು ಬಿಜೆಪಿಗೆ ವಾಪಸ್ ಕರೆ ತರುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ರಾಮುಲು ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಪ್ರಧಾನಿ ನರೇಂದ್ರ ಮೋದಿರವರನ್ನು ಮತ್ತೊಮ್ಮೆ ಭಾರತದ ಪ್ರಧಾನಿ ಮಾಡಲು, ಮೂರನೇ ಅವಧಿಯಲ್ಲಿ ಅವರಿಗೆ ಕರ್ನಾಟಕದದಿಂದ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ರಾಜ್ಯದ ಎಲ್ಲಾ 28 ಸ್ಥಾನಗಳಲ್ಲಿ ಜಯ ಸಾಧಿಸಲು ರೂಪಿಸಬೇಕಾದ ಕಾರ್ಯತಂತ್ರ, ಜೆಡಿಎಸ್ ಜೊತೆಗಿನ ಹೊಂದಾಣಿಕೆ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.