ಸಾರಾಂಶ
ಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿಯ ಮೂಡಭಟ್ಕಳದ ಯುವತಿ ರಮ್ಯಾ ಕೃಷ್ಣಾ ನಾಯ್ಕ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಕಾಂತಾರ-1 ಸಿನೆಮಾದಲ್ಲಿ ಸಹ ನಟಿಯಾಗಿ ಅವಕಾಶ ಗಿಟ್ಟಿಸಿಕೊಂಡು ನಟಿಸಿ ಗಮನ ಸೆಳೆದಿದ್ದು, ಅಭಿಮಾನಿಗಳು ಪಟ್ಟಣದಲ್ಲಿ ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ.ರಮ್ಯಾ ಕೃಷ್ಣ ನಾಯ್ಕ ಕಾಂತಾರ ಸಿನೆಮಾದಲ್ಲಿ ರಾಣಿಯ ಪಾತ್ರ ಮಾಡಿ ಮಿಂಚುತ್ತಿದ್ದಾಳೆ. ಮೂಡಭಟ್ಕಳದ ಕಾಟಿಮನೆಯ ಕೃಷ್ಣ ಲಚ್ಮಯ್ಯ ನಾಯ್ಕ ಹಾಗೂ ಪ್ರಭಾವತಿ ನಾಯ್ಕ ದಂಪತಿಗಳ ಪುತ್ರಿ ಈಕೆ. ಬೆಂಗಳೂರಿನಲ್ಲಿ (೨೦೧೬) ನಡೆದ ಟಾಪ್ ಮೊಡೆಲ್ ಹಂಟ್ ಸ್ಪರ್ಧೆಯಲ್ಲಿ ಖ್ಯಾತ ಚಿತ್ರನಟಿ ರಶ್ಮಿಕಾ ಮಂದಣ್ಣ ಇವರೊಂದಿಗೆ ಸ್ಪರ್ಧಿಸಿ ದ್ವಿತಿಯ ಸ್ಥಾನ ಪಡೆದಿದ್ದರು. ನಂತರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ಲಿಸ್ಟ್‌ನಲ್ಲಿ ತೇರ್ಗಡೆ ಹೊಂದಿದ ನಂತರ ಈಕೆಗೆ ಅನೇಕ ಕಿರುಚಿತ್ರದಲ್ಲಿ ನಟಿಸುವ ಅವಕಾಶಗಳೂ ದೊರೆತವು. ಕನ್ನಡದ ಧರಣಿ ಮಂಡಳ ಮಧ್ಯಗೊಳಗೆ, ನೋಡಿದವರು ಏನೆಂತಾರೆ, ಲಾಸ್ಟ್ ಆರ್ಡರ್ ಹಾಗೂ ಆಶ್ವಿನಿ ಪುನಿತ್ ರಾಜಕುಮಾರವರು ನಿರ್ದೇಶಿಸಿದ ಕಿರುಚಿತ್ರ ದ ಬೆಲ್ ನಲ್ಲಿ ನಟಿಸಿದ್ದರು. ತಮಿಳು ಚಿತ್ರವಾದ ನಿರಮ್ ಮಾರುಮ್ ಉಳಗಿಲ್ ದಲ್ಲಿ ನಾಯಕಿ ನಟಿಯಾಗಿ ಮಿಂಚಿದ್ದಾರೆ. ವಿವಿಧ ಸೌಂದರ್ಯವರ್ಧಕ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಟ್ಯಾಲಿ, ಎವಿಟಿ ಚಹಾ ಕಂಪನಿ, ಅಮುಲ್ ಇಂಡಿಯಾ, ಹಿಮಾಲಯ, ಪೀಟರ್ ಇಂಗ್ಲೇಡ್ ಕಂಪನಿಯ ಜಾಹೀರಾತುಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.