ದೊಡ್ಡಬಳ್ಳಾಪುರದಲ್ಲಿ ರಂಜಾನ್‌ ಸಡಗರ

| Published : Apr 12 2024, 01:03 AM IST

ಸಾರಾಂಶ

ದೊಡ್ಡಬಳ್ಳಾಪುರ: ಪವಿತ್ರ ರಂಜಾನ್ ಮಾಸದ ಅಂತ್ಯವನ್ನು ಸೂಚಿಸುವ ಈದ್-ಉಲ್ ಫಿತರ್ ಹಬ್ಬವನ್ನು ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ದೊಡ್ಡಬಳ್ಳಾಪುರ: ಪವಿತ್ರ ರಂಜಾನ್ ಮಾಸದ ಅಂತ್ಯವನ್ನು ಸೂಚಿಸುವ ಈದ್-ಉಲ್ ಫಿತರ್ ಹಬ್ಬವನ್ನು ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ದೊಡ್ಡಬಳ್ಳಾಪುರ ನಗರದ ಶಾಂತಿನಗರದ 7ನೇ ಕ್ರಾಸ್‌ನಲ್ಲಿರುವ ಪವಿತ್ರ ದರ್ಗಾದಲ್ಲಿ ಸಾವಿರಾರು ಮುಸಲ್ಮಾನ ಬಾಂಧವರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ, ಶಾಂತಿನಗರ ಮುಖ್ಯ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಸಂದೇಶ ನೀಡಿದ ಧಾರ್ಮಿಕ ಮುಖಂಡರು, ಹಬ್ಬವು ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಮತ್ತು ಪ್ರಾರ್ಥನೆಯನ್ನು ಸೂಚಿಸುತ್ತದೆ ಮತ್ತು ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ. ಈ ಹಬ್ಬವು ಒಗಟ್ಟು, ಕ್ಷಮೆ ಮತ್ತು ದಾನವನ್ನು ಉತ್ತೇಜಿಸುತ್ತದೆ. ಈದ್-ಉಲ್_ಫಿತರ್ ಹಬ್ಬ ಸಹಾನುಭೂತಿ, ಔದಾರ್ಯ ಮತ್ತು ಏಕತೆಯ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ ಮತ್ತು ನಮ್ಮ ವೈವಿಧ್ಯಮಯ ರಾಷ್ಟ್ರದ ನೀತಿಯೊಂದಿಗೆ ಪ್ರತಿಧ್ವನಿಸುತ್ತದೆ. ಇದು ಸಹಾನುಭೂತಿ, ಒಗ್ಗಟ್ಟಿನ ಮತ್ತು ಶಾಂತಿಯ ಮನೋಭಾವವನ್ನು ಮತ್ತಷ್ಟು ಹರಡುವ ಹಬ್ಬವಾಗಿದೆ. ಈದ್ ಎಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಆಶಿಸಿದರು.

ಇಲ್ಲಿನ ಇಸ್ಲಾಂಪುರ, ಕುಂಬಾರಪೇಟೆ, ಚಿಕ್ಕಪೇಟೆ, ಕೋಟೆ ರಸ್ತೆಯ ಮಸೀದಿಗಳು, ತಾಲೂಕಿನ ತೂಬಗೆರೆ, ಸಾಸಲು, ದೊಡ್ಡಬೆಳವಂಗಲ, ಮಧುರೆ ಹೋಬಳಿಗಳ ಹಲವು ಗ್ರಾಮಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆದವು.

ಮುಸಲ್ಮಾನ ಬಾಂಧವರು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡು ಹಬ್ಬವನ್ನು ಸಂಭ್ರಮಿಸಿದರು.

11ಕೆಡಿಬಿಪಿ2- ದೊಡ್ಡಬಳ್ಳಾಪುರದ ಶಾಂತಿನಗರದ ದರ್ಗಾದಲ್ಲಿ ನಡೆದ ರಂಜಾನ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಸಹಸ್ರಾರು ಮುಸಲ್ಮಾನ ಬಾಂಧವರು ಪಾಲ್ಗೊಂಡಿದ್ದರು.