ಸಾರಾಂಶ
ಬಳ್ಳಾರಿ ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಕೆ.ಜಿ. ಶಾಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಬಳ್ಳಾರಿ: ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿನ ರಾಘವ ಮೆಮೋರಿಯಲ್ ಅಸೋಸಿಯೇಷನ್‌ನಿಂದ ಪ್ರತಿವರ್ಷ ಕೊಡಮಾಡುವ ಬಳ್ಳಾರಿ ರಾಘವ ರಾಜ್ಯ ಮಟ್ಟದ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಕರ್ನಾಟಕದ ರಾಜೇಂದ್ರ ಕಾರಂತ ಹಾಗೂ ತಿರುಪತಿಯ ಕೋನೇಟಿ ಸುಬ್ಬರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ಆ.2ರಂದು ನಗರದ ರಾಘವ ಕಲಾಮಂದಿರದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಬಳ್ಳಾರಿ ರಾಘವರ 144ನೇ ಜಯಂತಿ ಕಾರ್ಯಕ್ರಮದಲ್ಲಿ ರಾಜೇಂದ್ರ ಕಾರಂತ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಳ್ಳಾರಿ ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಕೆ.ಜಿ. ಶಾಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್.ಎನ್. ರುದ್ರೇಶ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚನ್ನಪ್ಪ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಧಾರವಾಡದ ಆಟಮಾಟ ಕಲಾತಂಡದಿಂದ ಶ್ರೀಬಸವೇಶ್ವರರ ಜೀವನಾಧಾರಿತ ನಾಟಕ ಎಳೆಹೂಟೆ ಪ್ರದರ್ಶನಗೊಳ್ಳಲಿದೆ.ಆ.3ರಂದು ಸಂಜೆ 6 ಗಂಟೆಗೆ ಜರುಗುವ ಸಮಾರಂಭದ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಮಂಜುಳಾ ಚೆಲ್ಲೂರು ಹಾಗೂ ಆಂಧ್ರಪ್ರದೇಶದ ಖ್ಯಾತ ನಟ ವಾಡ್ರೇವು ಸುಂದರರಾವ್ ಭಾಗವಹಿಸುವರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರ ರಾವ್ ಅಧ್ಯಕ್ಷತೆ ವಹಿಸುವರು.
ಇದೇ ವೇಳೆ ತಿರುಪತಿಯ ಕೋನೇಟಿ ಸುಬ್ಬರಾಜು ಅವರಿಗೆ ಬಳ್ಳಾರಿ ರಾಘವ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ಶ್ರೀವಾಡ್ರೇವು ಸುಂದರರಾವ್ ಅವರಿಂದ ಯಯಾತಿಪುತ್ರ ಏಕಪಾತ್ರ ಅಭಿನಯ ಹಾಗೂ ಆಂಧ್ರಪ್ರದೇಶದ ಗುಂಟೂರಿನ ಅಮೃತ ಲಹರಿ ಥಿಯೇಟರ್ ಆರ್ಟ್ಸ್ ತಂಡದಿಂದ "ನಾನ್ನಾ...ನೇನು ವಚ್ಚೇಸ್ತ... " ತೆಲುಗು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅಸೊಸಿಯೇಷನ್ ಪ್ರಕಟಣೆ ತಿಳಿಸಿದೆ.