ವಿವಾಹವಾಗಿರುವ ನೂತನ ದಂಪತಿಗಳೂ ಸೇರಿದಂತೆ ಜಾತ್ರೆಗೆ ಆಗಮಿಸಿದ ಭಕ್ತರು ಇಲ್ಲೇ ಸಿಗುವ ಹಣ್ಣು ಜವನವನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದು ಕಂಡುಬಂದಿತು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಪುರಾಣ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿಯವರ ದೊಡ್ಡ ಜಾತ್ರೆಯು ಗುರುವಾರ ಸಡಗರ- ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಬೆಟ್ಟದ ತೇರಿನ ಬೀದಿಯಲ್ಲಿ ರಥವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥದ ಎರಡೂ ಬದಿಯಲ್ಲಿ ಕಟ್ಟಿದ್ದ ಹಗ್ಗವನ್ನು ಗೋವಿಂದನ ನಾಮಸ್ಮರಣೆಯಲ್ಲಿ ಸಾವಿರಾರು ಭಕ್ತರು ಎಳೆದು ಪುನೀತ ಭಾವ ಮೆರೆದರು. ಗುರುವಾರ ಬೆಳಗ್ಗೆ 10.13ರಿಂದ 10.27ರವರೆಗೆ ಸಲ್ಲುವ ಶುಭ ಮಿಥುನ ಲಗ್ನದ ಮೀನ ಗುರು ನವಾಂಶ ಶುಭ ಮುಹೂರ್ತದಲ್ಲಿ ಸಾವಿರಾರು ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ತೇರನ್ನು ಎಳೆಯುತ್ತಿದ್ದಂತೆಯೇ ಶಂಖ ಜಾಗಟೆಗಳ ಸಪ್ಪಳ, ಭಕ್ತರು ಹಾಡಿದ ಗೋವಿಂದ ನಾಮಾವಳಿ ಎಲ್ಲೆಡೆ ಪಸರಿಸಿತು. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಕಾಡಿನ ಅನೇಕ ಪೋಡುಗಳಿಂದ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಲಿಗರು ಆಗಮಿಸಿ ತಮ್ಮ ಆರಾಧ್ಯ ದೈವ ಬಿಳಿಗಿರಿರಂಗಪ್ಪನಿಗೆ ಭಕ್ತಿ ಸಮರ್ಪಿಸಿದರು.

ತೇರು ಆರಂಭಗೊಳ್ಳುವ ಮುಂಚೆ ರಥದ ಮೇಲ್ಭಾಗದಲ್ಲಿರುವ ಆಗಸದಲ್ಲಿ ಗರುಡ ಪಕ್ಷಿಯು ಹಾರುವ ಪ್ರತೀತಿ ಇದ್ದು. ತೇರನ್ನೆಳೆಯುವ ಕೆಲ ನಿಮಿಷಗಳ ಮುಂಚೆ ಆಗಸದಲ್ಲಿ ಗರುಡಗಳು ಹಾರಾಡಿದವು.

ವಿವಾಹವಾಗಿರುವ ನೂತನ ದಂಪತಿಗಳೂ ಸೇರಿದಂತೆ ಜಾತ್ರೆಗೆ ಆಗಮಿಸಿದ ಭಕ್ತರು ಇಲ್ಲೇ ಸಿಗುವ ಹಣ್ಣು ಜವನವನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದು ಕಂಡುಬಂದಿತು.

ಅರವಟ್ಟಿಗೆ ಮೂಲಕ ಸೇವೆ ಮೆರೆದ ಭಕ್ತರು: ಅಲ್ಲಲ್ಲಿ ಇರುವ ಮಂಟಪಗಳಲ್ಲಿ ಹರಕೆ ಹೊತ್ತ ಭಕ್ತರು ನೀರುಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ವಿವಿಧ ತಿಂಡಿಗಳನ್ನು ಅಲ್ಲಲ್ಲಿ ಮಾಡಲಾಗಿದ್ದ ಅರವಟ್ಟಿಗೆಗಳಲ್ಲಿ ನೀಡಿ ಪುನೀತರಾದರು. ತೇರಿನ ಸಂದರ್ಭದಲ್ಲಿ ರಥದ ಬೀದಿಯಲ್ಲಿ ನೂರಾರು ವರ್ತಕರು ತೇರಿಗೆ ಆಗಮಿಸಿ ತಮ್ಮ ಅಂಗಡಿ ಮಳಿಗೆಗಳನ್ನು ತೆರೆದಿದ್ದರು. ಸಿಹಿತಿಂಡಿ, ಪೂರಿಖಾರ, ಮಕ್ಕಳ ಆಟಿಕೆ ಸಾಮಾನುಗಳು, ದಿನಬಳಕೆಯ ವಸ್ತುಗಳಿಂದ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.

ರಥದಲ್ಲಿ ಕುಳ್ಳಿರಿಸಿದ್ದ ಉತ್ಸವ ಮೂರ್ತಿಯನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಹರಕೆ ಹೊತ್ತ ಭಕ್ತರು ತಮ್ಮ ಮಂಟಪಗಳಲ್ಲಿ ಹಸಿರು ಚಪ್ಪರ, ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮೂರ್ತಿಯನ್ನು ಇಲ್ಲಿಟ್ಟು ಪೂಜೆ ಸಲ್ಲಿಸಿದರು. ದೇವರಿಗೆ ಚಿನ್ನಾಭರಣವನ್ನು ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ಭಕ್ತರು ಮೆಟ್ಟಿಲುಗಳ ಮೇಲೆ ಹತ್ತುವ ಮೂಲಕ ಕಮರಿಯ ಮೇಲಿರುವ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ದರ್ಶನವನ್ನು ಪಡೆದು, ದೊಡ್ಡ ದೇವರ ಪಾದುಕೆಗಳಿಂದ ಆಶೀರ್ವಾದ ಪಡೆದು ಪುನೀತರಾದರು.

ಬಸ್ ಹತ್ತುವ ಜನರನ್ನು ಸರತಿ ಸಾಲಿನಲ್ಲಿ ಕಳುಹಿಸುವ ಉದ್ದೇಶದಿಂದ ಬ್ಯಾರಿಕೇಡ್ ಹಾಕಲಾಗಿತ್ತು. ಸರತಿ ಸಾಲಿನಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಈ ಬಾರಿ ಶಾಮಿಯಾನದ ವ್ಯವಸ್ಥೆ ಮಾಡಲಾಗಿತ್ತು.

ಯಳಂದೂರು ಪಟ್ಟಣದ ನಾಡಮೇಗಲಮ್ಮ ದೇಗುಲದ ಮುಂಭಾಗ ವಿಶೇಷ ಬಸ್‌ಗಳ ಪ್ರಯಾಣಕ್ಕೆ ತಾತ್ಕಾಲಿಕ ನಿಲ್ದಾಣ ನಿರ್ಮಿಸಲಾಗಿತ್ತು. ಬೆಳಗ್ಗೆಯಿಂದಲೇ ಜನಜಂಗುಳಿ ನೆರೆದಿತ್ತು. ಅಲ್ಲದೆ ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆ ಹಾಗೂ ದೊಡ್ಡ ಅಂಗಡಿ ಬೀದಿಯ ರಸ್ತೆಯನ್ನು ಜಾತ್ರೆ ನಿಮಿತ್ತ ಬಸ್‌ಗಳಿಗೆ ತಾತ್ಕಾಲಿಕವಾಗಿ ಏಕ ಮುಖ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು.