ಸಾರಾಂಶ
ಗ್ರಂಥಾಲಯ ಶಾಸ್ತ್ರದ ಜ್ಞಾನ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಕೊಡುಗೆ ಆಧುನಿಕ ಗ್ರಂಥಾಲಯ ವ್ಯವಸ್ಥೆಗೆ ಬುನಾದಿಯಾಗಿದೆ ಎಂದು ಪ್ರಾಂಶುಪಾಲೆ ಪವಿತ್ರ ಜಿ.ಬಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗ್ರಂಥಾಲಯ ಶಾಸ್ತ್ರದ ಜ್ಞಾನ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಕೊಡುಗೆ ಆಧುನಿಕ ಗ್ರಂಥಾಲಯ ವ್ಯವಸ್ಥೆಗೆ ಬುನಾದಿಯಾಗಿದೆ ಎಂದು ಪ್ರಾಂಶುಪಾಲೆ ಪವಿತ್ರ ಜಿ.ಬಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಡಾ.ಎಸ್.ಆರ್.ರಂಗನಾಥನ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ರಂಗನಾಥನ್ ಸ್ಮರಿಸುವ ಉದ್ದೇಶದಿಂದ ಗ್ರಂಥಾಲಯ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನಕ್ಕೆ ಐದು ಕಾನೂನುಗಳನ್ನು ರೂಪಿಸಿದ್ದಾರೆ. ಕೋಲನ್ ವರ್ಗೀಕರಣ ಪದ್ದತಿ ಅಭಿವೃದ್ಧಿ ಪಡಿಸಿದವರು ಎಂದರು.ಡಾ.ಎಸ್.ಆರ್.ರಂಗನಾಥನ್ರ ತತ್ವ ಮತ್ತು ಪರಂಪರೆಯನ್ನು ಪ್ರಚಾರ ಪಡಿಸಬೇಕು. ಉನ್ನತ ಶಿಕ್ಷಣ, ಜ್ಞಾನ ವಿಸ್ತರಣೆಯಲ್ಲಿ ಗ್ರಂಥಾಲಯಗಳ ಮಹತ್ವ ಅಪಾರವಾಗಿದೆ.ಗ್ರಂಥಪಾಲಕರ ಸೇವೆ ಗೌರವಿಸಬೇಕು ಎಂದು ಸಲಹೆ ನೀಡಿದರು.
ಗ್ರಂಥಾಲಯ ಶಿಕ್ಷಣ ಸಂಸ್ಥೆಯ ಹೃದಯ ಎನ್ನುವ ಡಾ. ಎಸ್.ಆರ್.ರಂಗನಾಥನ್ ರ ಸಂದೇಶ ಪುನಃ ಒತ್ತಿ ಹೇಳಿದ ಅವರು,ಈ ಕಾರ್ಯಕ್ರಮವು ಜ್ಞಾನ ವಿನಿಮಯ,ಶೈಕ್ಷಣಿಕ ಚರ್ಚೆ ಹಾಗೂ ಸಮುದಾಯ ಬಾಂಧವ್ಯ ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದರು.ಗ್ರಂಥಪಾಲಕ ಶ್ರೀನಿವಾಸ ನಾಯಕ ಮಾತನಾಡಿ, ಡಾ. ರಂಗನಾಥನ್ ರ ಕೃತಿಗಳು,ಐದು ಗ್ರಂಥಾಲಯ ಶಾಸ್ತ್ರ ಕಾನೂನುಗಳು ಹಾಗೂ ಸಮಕಾಲೀನ ಶಿಕ್ಷಣದಲ್ಲಿ ಗ್ರಂಥಾಲಯಗಳ ಪಾತ್ರ ಕುರಿತು ಹೇಳಿದರು.
ಗ್ರಂಥಾಲಯ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಗ್ರಂಥಾಲಯ ದಿನಾಚರಣೆಯಲ್ಲಿ ಐಕ್ಯೂಎಸಿ ಸಂಚಾಲಕರಾದ ವಿಜಯಕುಮಾರ್,ರಮೇಶ್, ಮಂಜುನಾಥ್, ಮಂಜು ಎಸ್.ಆಂಥೋನಿ ಸ್ಯಾಂಸನ್,ಜ್ಯೋತಿ, ಅನ್ನಪೂರ್ಣ, ತುಳಸೀ ರಾಮ್, ಕೃಷ್ಣಮೂರ್ತಿ ಇದ್ದರು.