ಸಾರಾಂಶ
ಉತ್ತರ ಕರ್ನಾಟಕದಾದ್ಯಂತ ರಂಗಪಂಚಮಿಯನ್ನು ಶುಕ್ರವಾರ ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ/ಬಾಗಲಕೋಟೆ
ಹೋಳಿ ಅಂಗವಾಗಿ ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೆಳಗಾವಿ, ರಾಯಚೂರು ಸೇರಿ ಉತ್ತರ ಕರ್ನಾಟಕದಾದ್ಯಂತ ರಂಗಪಂಚಮಿಯನ್ನು ಶುಕ್ರವಾರ ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಯುವಕ-ಯುವತಿಯರು, ಮಕ್ಕಳು ಸೇರಿ ಹಲಗಿ ಬಾರಿಸಿ, ಪರಸ್ಪರ ಬಣ್ಣ ಎರಚಿದರು. ಕೆಲವರು ರೇನ್ ಡ್ಯಾನ್ಸ್, ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು.ಹೋಳಿ ಹುಣ್ಣಿಮೆಯ 5ನೇ ದಿನದಂದು ರಂಗಪಂಚಮಿಯನ್ನು ಉತ್ತರ ಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಬರ, ಸುಡುವ ಬಿಸಿಲಿನ ಆರ್ಭಟವನ್ನೂ ಲೆಕ್ಕಿಸದೆ ಜನ ಬಣ್ಣದೋಕುಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯ್ದ ಪ್ರದೇಶಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಹಲವೆಡೆ 5 ದಿನಗಳ ಹಿಂದೆ ಬಿದಿರಿನಿಂದ ಪ್ರತಿಷ್ಠಾಪಿಸಲಾಗಿದ್ದ ರತಿ-ಮನ್ಮಥರ ಮೂರ್ತಿಗಳನ್ನು ಟ್ರ್ಯಾಕ್ಟರ್, ಟಂಟಂ, ತಳ್ಳುಗಾಡಿಗಳಲ್ಲಿ ಮೆರವಣಿಗೆ ಮಾಡಿ ಸಂಜೆ ವೇಳೆ ನಗರ, ಗ್ರಾಮದ ಪ್ರಮುಖ ವೃತ್ತಗಳಲ್ಲಿ ದಹನ ಮಾಡಲಾಯಿತು. ಕೆಲವೆಡೆ ಮುಸ್ಲಿಮರೂ ಹೋಳಿ ಆಚರಣೆಯಲ್ಲಿ ಭಾಗಿಯಾಗಿ, ಕೋಮು-ಸೌಹಾರ್ದ ಮೆರೆದರು. ಕೆಲವೆಡೆ ಸುಮಾರು 30 ಅಡಿ ಎತ್ತರದಲ್ಲಿ ಮಣ್ಣಿನ ಮಡಿಕೆ ಕಟ್ಟಿ, ತಂಡ ರಚಿಸಿಕೊಂಡು ಒಬ್ಬರ ಮೇಲೊಬ್ಬರು ಹತ್ತಿ ಮಡಿಕೆ ಒಡೆಯುವ ಸಂಭ್ರಮದಲ್ಲಿ ಭಾಗಿಯಾದರು.