ಲಕ್ಷ್ಮೇಶ್ವರದಲ್ಲಿ ಅದ್ಧೂರಿಯಾಗಿ ನಡೆದ ರಂಗಪಂಚಮಿ

| Published : Mar 30 2024, 12:45 AM IST

ಸಾರಾಂಶ

ಹೋಳಿ ಹಬ್ಬದಲ್ಲಿ ಯುವಕರು ವಿವಿಧ ಬಗೆಯ ಮುಖವಾಡ ಧರಿಸಿ ಬಣ್ಣದ ಹಬ್ಬಕ್ಕೆ ವಿಶೇಷ ಮೆರುಗು ತಂದಿದ್ದು ಕಂಡು ಬಂದಿತು

ಲಕ್ಷ್ಮೇಶ್ವರ: ಪಟ್ಟಣದಲ್ಲಿ ರಂಗಪಂಚಮಿ ಹಬ್ಬವನ್ನು ಶುಕ್ರವಾರ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಪಟ್ಟಣದಲ್ಲಿ ಹಾವಳಿ ಹನುಮಪ್ಪನ ದೇವಸ್ಥಾನ, ಹಳ್ಳಿಕೇರಿ ಓಣಿ ಹಾಗೂ ಸೊಪ್ಪಿನ ಕೇರಿ ಓಣಿಯಲ್ಲಿ ರಂಗಪಂಚಮಿ ಹಬ್ಬದಲ್ಲಿ ಡಿಜೆ ಸೌಂಡ್ ಗೆ ಯುವಕರು ಹಾಗೂ ಯುವತಿಯರು ಹೆಜ್ಜೆ ಹಾಕಿ ಕುಣಿದು ಪರಸ್ಪರ ಬಣ್ಣ ಹಚ್ಚುವ ಮೂಲಕ ಓಕುಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹಾವಳಿ ಹನುಮಪ್ಪನ ದೇವಸ್ಥಾನ ಹಾಗೂ ಸೊಪ್ಪಿನ ಕೇರಿ ಓಣಿಯಲ್ಲಿ ರಂಗಪಂಚಮಿ ಅಂಗವಾಗಿ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಯುವಕರು ಹಾಗೂ ಪಡ್ಡೆ ಹೈಕಳು ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಕುಣಿಯುತ್ತಿದ ದೃಶ್ಯ ಎದ್ದು ಕಾಣುವಂತೆ ಇತ್ತು.

ಪಟ್ಟಣದ ಬಸ್ತಿಬಣ, ಪಂಪ ವೃತ್ತಿ, ಹಳೆ ಬಸ್ ಸ್ಟ್ಯಾಂಡ್ ಕ್ರಾಸ್ , ಡೋಹರ ಕಕ್ಕಯ್ಯ ಓಣಿ, ಹಳ್ಳಿಕೇರಿ ಓಣಿ, ಕೋರ್ಟ್ ಹತ್ತಿರ, ಚಳ್ಳಮರದ ಓಣಿ, ಸೋಮೇಶ್ವರ ತೇರಿನ ಮನೆಯ ಆವರಣದಲ್ಲಿ ಕಾಮ ದಹನ ಮಾಡಿ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು.

ಹೋಳಿ ಹಬ್ಬದಲ್ಲಿ ಯುವಕರು ವಿವಿಧ ಬಗೆಯ ಮುಖವಾಡ ಧರಿಸಿ ಬಣ್ಣದ ಹಬ್ಬಕ್ಕೆ ವಿಶೇಷ ಮೆರುಗು ತಂದಿದ್ದು ಕಂಡು ಬಂದಿತು.

ಕೆಲವರು ಹೋಳಿ ಕಾಮಣ್ಣನ ರೀತಿ ಬಣ್ಣ ಬಳಿದುಕೊಂಡು ರಂಗಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಪಟ್ಟಣದಲ್ಲಿ ಯುವತಿಯರು ಹೋಳಿ ಹಬ್ಬದಲ್ಲಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.

ಶಾಸಕ ಡಾ. ಚಂದ್ರು ಲಮಾಣಿ ಅವರು ಹಳ್ಳಿಕೇರಿ ಓಣಿಯಲ್ಲಿ ರಂಗಪಂಚಮಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ಹೋಳಿ ಹಬ್ಬವು ನಮ್ಮ ಹಿಂದೂ ಪರಂಪರೆ ಭಾಗವಾಗಿ ಆಚರಿಸಲಾಗುತ್ತದೆ. ಶಿವನ ತಪಸ್ಸನ್ನು ಭಂಗಿ ಮಾಡಿದ ಮನ್ಮಥನನ್ನು ಶಿವನು ತನ್ನ ಉರಿಗಣ್ಣು ತೆರೆದು ಸುಟ್ಟು ಆತನ ಸಂಹಾರ ಮಾಡಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.ಹೀಗೆ ನಮ್ಮ ಹಬ್ಬಗಳಲ್ಲಿ ತನ್ನದೆ ಆದ ಮಹತ್ವ ಹಾಗೂ ಅರ್ಥವಿದೆ. ನಮ್ಮ ಹಬ್ಬಗಳ ಆಚರಣೆಯಲ್ಲಿ ಪ್ರಕೃತಿಯ ಆರಾಧನೆ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ.ಇಂತಹ ಹಬ್ಬಗಳು ಈಗ ಅರ್ಥ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ.ಯುವಕರು ತಮ್ಮ ಮೇಲಿರುವ ಜವಾಬ್ದಾರಿ ಅರಿತು ಹೆಜ್ಜೆ ಇಡುವುದು ಅವಶ್ಯವಾಗಿದೆ. ಹೋಳಿ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಹೇಳಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಯುವಕರು ತಮ್ಮ ಹೆಗಲ ಮೇಲೆ ಹೊತ್ತು ಕುಣಿದರು.

ಶಾಸಕ ಡಾ. ಚಂದ್ರು ಲಮಾಣಿ ಯುವಕರೊಂದಿಗೆ ಕುಣಿಯುತ್ತ ಬಣ್ಣ ಹಚ್ಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸುನೀಲ ಮಹಾಂತಶೆಟ್ಟರ, ಎಂ.ಆರ್.ಪಾಟೀಲ, ನವೀನ ಬೆಳ್ಳಟ್ಟಿ, ಅನೀಲ ಮುಳಗುಂದ, ನಿಂಗಪ್ಪ ಬನ್ನಿ, ಪಾಣಿ ಗಟ್ಟಿ, ಶಿವು ಕಟಗಿ, ಮಂಜು ಗೊರವರ, ರಾಜು ಅಂದಲಗಿ,

ಶಕ್ತಿ ಕತ್ತಿ, ಬಸವರಾಜ ಚಕ್ರಸಾಲಿ ಸೇರಿದಂತೆ ಅನೇಕರು ಇದ್ದರು. ಪಟ್ಟಣದಲ್ಲಿ ಬೆಳಗ್ಗೆ ಆರಂಭವಾದ ರಂಗಪಂಚಮಿ ಹಬ್ಬವು ಸಂಜೆ 4 ಗಂಟೆಯವರೆಗೆ ನಡೆಯಿತು.