ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆಯಿಂದ ಜೂ. 12ರಿಂದ ಮೂರು ದಿನಗಳ "ರಂಗತೋರಣ ಕಪ್ಪಗಲ್ಲು ನಾಟಕೋತ್ಸವ " ಹಾಗೂ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.

ಬಳ್ಳಾರಿ: ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆಯಿಂದ ಜೂ. 12ರಿಂದ ಮೂರು ದಿನಗಳ "ರಂಗತೋರಣ ಕಪ್ಪಗಲ್ಲು ನಾಟಕೋತ್ಸವ " ಹಾಗೂ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಕಪ್ಪಗಲ್ಲು ಗ್ರಾಮದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಇದು ಮೂರನೇ ವರ್ಷ. ಈ ಬಾರಿಯ ನಾಟಕೋತ್ಸವದಲ್ಲಿ ವೃತ್ತಿ ರಂಭೂಮಿಯಲ್ಲಿ ಅತ್ಯಂತ ಜನಪ್ರಿಯ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕ ವೀಕ್ಷಣೆಗೆ ಉಚಿತ ಪ್ರವೇಶ ಇರುತ್ತದೆ. ಗ್ರಾಮೀಣ ಪರಿಸರದಲ್ಲಿ ರಂಗಭೂಮಿ ಅಭಿರುಚಿ ಮುಂದುವರಿಸುವುದು ಹಾಗೂ ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಪ್ರಚುರಗೊಳಿಸುವ ಉದ್ದೇಶದಿಂದ ನಾಟಕೋತ್ಸವ ಆಯೋಜಿಸಲಾಗಿದ್ದು, ಪ್ರತಿವರ್ಷವೂ ನಾಟಕೋತ್ಸವದಲ್ಲಿ ನಾಡಿನ ಸಾಂಸ್ಕೃತಿಕ ಮೇರು ವ್ಯಕ್ತಿ ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಬಾರಿ ಗಡಿನಾಡು ಆದವಾನಿಯ ಅಪ್ಪಟ ಕನ್ನಡ ಕಲಾವಿದೆ ಆದವಾನಿ ವೀಣಾ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಶ್ರೀಧರ ಹೆಗಡೆ ಅವರಿಗೆ ಪ್ರಶಸ್ತಿ ಪುರಸ್ಕಾರ ಜರುಗಲಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ ₹25 ಸಾವಿರ ನಗದು, ಪ್ರಶಸ್ತಿ ಫಲಕ ನೀಡಲಾಗುವುದು ಎಂದು ತಿಳಿಸಿದರು.

ಜೇವರ್ಗಿ ರಾಜಣ್ಣ ಕಂಪನಿಯ ನಾಟಕಗಳ ಪ್ರದರ್ಶನ: ಜೂ. 12ರಂದು ಸಂಜೆ 6.30ಕ್ಕೆ ರಂಗತೋರಣ-ಕಪ್ಪಗಲ್ಲು ನಾಟಕೋತ್ಸವಕ್ಕೆ ಚಾಲನೆ ದೊರೆಯಲಿದೆ. ಶ್ರೀಧರಗಡ್ಡೆಯ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಶ್ರೀ ಮರಿಕೊಟ್ಟೂರು ದೇವರು ಸಾನ್ನಿಧ್ಯ ವಹಿಸುವರು. ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಉದ್ಘಾಟಿಸುವರು. ಬೆಂಗಳೂರಿನ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ ಹಾಗೂ ಕಪ್ಪಗಲ್ಲು ಗ್ರಾಮದ ಮುಖಂಡರು ಭಾಗವಹಿಸುವರು. ಮೊದಲ ದಿನ ಜೇವರ್ಗಿ ರಾಜಣ್ಣ ರಚನೆ-ನಿರ್ದೇಶನದ "ಮುತ್ತಿನಂತ ಅತ್ತಿಗೆ " ನಾಟಕ ಪ್ರದರ್ಶನಗೊಳ್ಳಲಿದೆ.

ಜೂ. 13ರಂದು ಜರುಗುವ ನಾಟಕೋತ್ಸವದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹಾಗೂ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಪುರುಷೋತ್ತಮ ರೆಡ್ಡಿ ದಮ್ಮೂರು ಭಾಗವಹಿಸುವರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ-ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.

ಬಳಿಕ "ಕುಂಟ ಕೋಣ ಮೂಕ ಜಾಣ " ನಾಟಕ ಪ್ರದರ್ಶನ ಜರುಗಲಿದೆ. ಜೂ. 14ರಂದು ನಡೆಯುವ ನಾಟಕೋತ್ಸವದ ಸಾನ್ನಿಧ್ಯವನ್ನು ಉರವಕೊಂಡ ಗವಿಮಠ ಸಂಸ್ಥಾನದ ಜಗದ್ಗುರು ಡಾ. ಕರಿಬಸವ ರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಕೊನೆಯ ದಿನದ ನಾಟಕೋತ್ಸವದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಆದವಾನಿ ವೀಣಾ ಹಾಗೂ ಶ್ರೀಧರ ಹೆಗಡೆ ಅವರಿಗೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ವಾದಿರಾಜ ಭಾಗವಹಿಸುವರು. ಕೊನೆಯಲ್ಲಿ ಜೇವರ್ಗಿ ರಾಜಣ್ಣ ಅವರ ರಚನೆ ಮತ್ತು ನಿರ್ದೇಶನದ "ರೈತ ಮನೆತನ " ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಭುದೇವ ಕಪ್ಪಗಲ್ಲು ವಿವರಿಸಿದರು.

ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ಲು ಹಾಗೂ ಜೋಳದರಾಶಿ ಪೊಂಪನಗೌಡ ಸುದ್ದಿಗೋಷ್ಠಿಯಲ್ಲಿದ್ದರು.