ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ರಂಗಾಯಣದ ಭೂಮಿಗೀತದಲ್ಲಿ ಶನಿವಾರ ದಶಾನನ ಸ್ವಪ್ನಸಿದ್ಧಿ ನಾಟಕವನ್ನು ಸಾಗರದ ಭಳೀರೇ ವಿಚಿತ್ರಮ್ತಂಡದವರು ಪ್ರಸ್ತುತ ಪಡಿಸಿದರು.ಕುವೆಂಪು ಅವರ ರಚನೆಯ ಈ ನಾಟಕವನ್ನು ಮಂಜು ಕೊಡಗು ನಿರ್ದೇಶಿಸಿದ್ದರು. ''ದಶಾನನ ಸ್ವಪ್ನಸಿದ್ಧಿ''ಯು ಕುವೆಂಪು ವಿರಚಿತ ಮೇರು ಕೃತಿ ''ಶ್ರೀರಾಮಾಯಣ ದರ್ಶನಂನಿಂದ ಆಯ್ದ ಅಧ್ಯಾಯವನ್ನು ರಂಗರೂಪಕ್ಕೆ ತರಲಾಗಿದೆ. ಈ ಅಧ್ಯಾಯದಲ್ಲಿ ರಾಮಾಯಣದ ಕುರಿತಾದ ಹೊಸ ಆಯಾಮಗಳನ್ನು ಕುವೆಂಪು ಅವರು ನೀಡಿದ್ದಾರೆ. ಊಹೆಗೂ ನಿಲುಕದ ಕುವೆಂಪು ಅವರ ರಾವಣನನ್ನು ನಾವಿಲ್ಲಿ ಕಾಣಬಹುದು. ಯುದ್ಧದ ಹಿಂದಿನ ದಿನ ರಾವಣನು ಒಂದು ಅದ್ಭುತ ಕನಸಿಗೆ ಜಾರುತ್ತಾನೆ, ಆ ಮೂರು ಹಂತದ ಕನಸನ್ನು ದಾಟುವುದರಲ್ಲಿ ರಾವಣನಿಗೆ ಇಡೀ ರಾಮಾಯಣದ ಪಯಣದ ಮೇಲಿನ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ. ಅಂತಹ ಅದ್ಭುತ ಕಲ್ಪನೆಯ ನಾಟಕ ಎಲ್ಲರ ಗಮನ ಸೆಳೆಯಿತು.ಕಿರುರಂಗ ಮಂದಿರದಲ್ಲಿ ಸಾದತ್ ಹಸನ್ಮಾಂಟೋ ರಚನೆಯ ತಮಾಷಾ ನಾಟಕವನ್ನು ಕೇರಳದ ತ್ರಿಶೂರ್ನ ಕ್ಯಾಲಿಕಟ್ಯೂನಿವರ್ಸಿಟಿ ಲಿಟಲ್ಥಿಯೇಟರ್ಕಲಾವಿದರು ಪ್ರಸ್ತುತಪಡಿಸಿದರು. ಮಲಯಾಳಂನ ಈ ನಾಟಕವನ್ನು ಡಾ. ನೀಲಂ ಮಾನ್ಸಿಂಗ್ಚೌಧರಿ ನಿರ್ದೇಶಿಸಿದರು.ವನರಂಗದಲ್ಲಿ ತಲ್ಕಿ ಕನ್ನಡ ನಾಟಕವನ್ನು ಬೆಂಗಳೂರಿನ ಪಯಣ ರಂಗತಂಡದ ಕಲಾವಿದರು, ಶ್ರೀಜಿತ್ಸುಂದರಂ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದರು.ಬೆಂಗಳೂರು ಲಿಟಲ್ ಥಿಯೇಟರ್ ಫೌಂಡೇಷನ್ ಕಲಾವಿದರು, ವಿಜಯ ಪದಕಿ ರಚನೆಯ ಕಾಬುಲಿವಾಲಾ ಕಾಲಿಂಗ್ ಇಂಗ್ಲಿಷ್ ನಾಟಕವನ್ನು ಮುರ್ತುಜ ಖೆಟ್ಟಿ, ವಿಜಯ ಪದಕಿ ನಿರ್ದೇಶನದಲ್ಲಿ ಕಲಾಮಂದಿರ ವೇದಿಕೆಯಲ್ಲಿ ಪ್ರದರ್ಶಿಸಿದರು.