ಗಮನ ಸೆಳೆದ ಮಹಿಳೆಯರ ಬೈಕ್ ರ್‍ಯಾಲಿ

| Published : Oct 25 2025, 01:02 AM IST

ಸಾರಾಂಶ

ತುಂತುರು ಮಳೆಯ ಹನಿಯ ನಡುವೆ ಉತ್ಸಾಹದಿಂದ ರಾಣಿ ಚನ್ನಮ್ಮಾಜಿಯ 201ನೇ ವಿಜಯೋತ್ಸವದ ಅಂಗವಾಗಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಮಹಿಳೆಯರು ಬೈಕ್ ರ್‍ಯಾಲಿಯಲ್ಲಿ ಎಲ್ಲರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ತುಂತುರು ಮಳೆಯ ಹನಿಯ ನಡುವೆ ಉತ್ಸಾಹದಿಂದ ರಾಣಿ ಚನ್ನಮ್ಮಾಜಿಯ 201ನೇ ವಿಜಯೋತ್ಸವದ ಅಂಗವಾಗಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಮಹಿಳೆಯರು ಬೈಕ್ ರ್‍ಯಾಲಿಯಲ್ಲಿ ಎಲ್ಲರ ಗಮನ ಸೆಳೆಯಿತು. ರಾಷ್ಟ್ರೀಯ ಹೆದ್ದಾರೆ ಪಕ್ಕದ ಹುಲಿಕಟ್ಟಿ ಮೊರಾರ್ಜಿ ವಸತಿ ಶಾಲೆಯಿಂದ ಪ್ರಾರಂಭವಾದ ಬೈಕ್ ರ್‍ಯಾಲಿಯು ಹೆದ್ದಾರಿ ಮೂಲಕ ಹರ ಹರ ಮಹಾದೇವ, ಚನ್ನಮ್ಮಾಜಿಯ ಜೈಘೋಷಗಳನ್ನು ಕೂಗುತ್ತ ಬೈಕ್ ಮೂಲಕ ಸಾಗುತ್ತಿದ್ದರು. ರಸ್ತೆಯುದ್ದಕ್ಕೂ ಜೈ ಕಾರದ ಘೋಷಣೆಗಳು ಮೊಳಗಿದ್ದವು. ಪುರುಷರಿಗಿಂತ ನಾವೇನು ಕಮ್ಮಿ ಎಂಬಂತೆ ಬೈಕ್ ರ್‍ಯಾಲಿಯು ಕಿತ್ತೂರ ಪ್ರವೇಶಿಸುತ್ತಿದ್ದಂತೆ ಚನ್ನಮ್ಮಾಜಿಯ ಅಭಿಮಾನಿಗಳು ಜೈ ಘೋಷಗಳನ್ನು ಕೂಗುತ್ತ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಚನ್ನಮ್ಮಾಜಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಸಾಗಿ ಚನ್ನಮ್ಮಾಜಿಯ ಕೋಟೆಯೊಳಗಡೆ ಇರುವ ಗ್ರಾಮದೇವಿ ದೇವಸ್ಥಾನಕ್ಕೆ ಬಂದು ಬೈಕ್ ರ್‍ಯಾಲಿ ಸಂಪನ್ನಗೊಂಡಿತು.ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ ಮಹಿಳೆಯರು ಭಾರತೀಯ ಸಂಸ್ಕ್ರತಿಯ ಇಳಕಲ್ಲ ಸೀರೆಯನ್ನಟ್ಟ ನಾರಿಯರು, ತಲೆಗೆ ಪೇಠಾ, ಮೂಗುತಿ, ಕೈ ತುಂಬ ಕೈಬಳೆ ತೊಟ್ಟು ಆಕರ್ಷಕವಾಗಿ ಬೈಕ್ ಏರಿ ಮುನ್ನಡೆದರು. ಮಹಿಳಾ ಅಧಿಕಾರಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದರು. ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಪ್ರವಾಸೋದ್ಯಮ ಜಂಟಿ ನಿರ್ದೇಶಕಿ ಸೌಮ್ಯಾ ಭಾಪಟ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರಭಾವತಿ ಫಕೀರಪೂರ, ತಹಸೀಲ್ದಾರ್‌ ಕಾರ್ಯಲಯದಿಂದ ಮಹಿಳಾ ಸಿಬ್ಬಂದಿ, ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಶಿಕ್ಷಕಿಯರು, ಯುವತಿಯರು ಸೇರಿದಂತೆ ನೂರಾರು ಮಹಿಳೆಯರಿಂದ ಕಿತ್ತೂರಿನಲ್ಲಿ ಚನ್ನಮ್ಮಾಜಿಯ ವೇಷಧಾರಿಗಳಾಗಿ ಬೃಹತ್ ಬೈಕ್ ರ್‍ಯಾಲಿ ಗಮನ ಸೆಳೆಯಿತು.