ಸಾರಾಂಶ
ಬಸವರಾಜ ಸರೂರ
ರಾಣಿಬೆನ್ನೂರು: ಜಿಲ್ಲೆಯಲ್ಲಿಯೇ ಜನತೆಗೆ ಕುಡಿಯುವ ನೀರು ಪೂರೈಕೆಯಲ್ಲಿ ರಾಣಿಬೆನ್ನೂರು ನಗರ ಉತ್ತಮ ಸ್ಥಿತಿಯಲ್ಲಿದೆ. ಕಳೆದ ವರ್ಷದ ಬೇಸಿಗೆ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಬಂದಾಗಿದ್ದರಿಂದ ಹದಿನೈದು ದಿನಗಳ ಕಾಲ ತೊಂದರೆಯಾಗಿದ್ದನ್ನು ಹೊರತುಪಡಿಸಿದರೆ, ವರ್ಷಪೂರ್ತಿ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ನಗರಕ್ಕೆ ನೀರು ಪೂರೈಕೆ ಉತ್ತಮವಾಗಿದ್ದರೂ ಬೇಸಿಗೆ ಪ್ರಾರಂಭವಾಗಿರುವುದರಿಂದ ಸಹಜವಾಗಿಯೇ ನೀರಿನ ಬಳಕೆ ಹೆಚ್ಚಾಗಿದೆ. ತುಂಗಭದ್ರಾ ನದಿಯಿಂದ ರಾಣಿಬೆನ್ನೂರು ಹಾಗೂ ಬ್ಯಾಡಗಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ನದಿಯಲ್ಲಿ ನೀರಿನ ಮೂಲವಿದೆ. ಆದರೆ ಸುಡುಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ನೀರನ್ನು ಹಿತಮಿತವಾಗಿ ಬಳಸಬೇಕೆಂದು ಸ್ಥಲೀಯ ಆಡಳಿತ ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇರುತ್ತದೆ.ನೀರು ಪೂರೈಕೆ ಪ್ರಮಾಣ: ಜಿಲ್ಲೆಯ ಅತಿದೊಡ್ಡ ನಗರವಾದ ರಾಣಿಬೆನ್ನೂರು 1.35 ಲಕ್ಷ ಜನಸಂಖ್ಯೆ ಹೊಂದಿದ್ದು, ದಿನಕ್ಕೆ ಪ್ರತಿಯೊಬ್ಬರಿಗೆ 135 ಲೀಟರ್‌ನಂತೆ ಒಟ್ಟು 23 ಎಂಎಲ್‌ಡಿ ಕುಡಿಯುವ ನೀರು ಅಗತ್ಯವಿದೆ. 28410 ಮನೆಗಳಿಗೆ ನಲ್ಲಿ ಸಂಪರ್ಕವಿದೆ. ಈಗಾಗಲೇ ನಿರಂತರ ಕುಡಿಯುವ ನೀರು ಯೋಜನೆಯಲ್ಲಿ ಎಲ್ಲ ವಾರ್ಡಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಅದಕ್ಕಾಗಿಯೇ ತಾಲೂಕಿನ ಮುದೇನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಜಾಕ್‌ವೆಲ್ ಮೂಲಕ ನೀರನ್ನು ತರುವ ಮೂಲಕ ಶುದ್ಧೀಕರಿಸಿ ರಾಣಿಬೆನ್ನೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವಿದ್ದು, ಈ ಬೇಸಿಗೆಯನ್ನು ದಾಟಲಿದೆ. ಹಾಗೊಂದು ವೇಳೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಭದ್ರಾ ಜಲಾಶಯದಿಂದ ನೀರನ್ನು ಬಿಡಲಾಗುವುದು ಎನ್ನುತ್ತಾರೆ ಕುಡಿಯುವ ನೀರು ಪೂರೈಕೆ ಅಧಿಕಾರಿಗಳು.ಬೋರವೆಲ್‌ಗಳ ವ್ಯವಸ್ಥೆ: ನಗರದ 35 ವಾರ್ಡಗಳಲ್ಲಿ ಒಟ್ಟು 280 ಕೊಳವೆ ಬಾವಿಗಳಿವೆ. 257 ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ದನಕರುಗಳಿಗೆ ಹಾಗೂ ಹಳೆಯ ನಗರದಲ್ಲಿ ಬಟ್ಟೆ ತೊಳೆಯಲು ಬಳಕೆ ಮಾಡಲಾಗುತ್ತಿದೆ. ನದಿಯ ನೀರಿನ ಜತೆಗೆ ಬೋರವೆಲ್‌ಗಳ ನೀರು ಜನರಿಗೆ ಆಸರೆಯಾಗಿದೆ.ಒಂದು ದಿನದ ಮಟ್ಟಿಗೆ ಸಂಗ್ರಹ: ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ನಗರಕ್ಕೆ ನಿರಂತರ ನೀರು ಪೂರೈಕೆಯಾಗುತ್ತಿದೆ. ಆದರೆ ಬೇಸಿಗೆಯಾದ ಕಾರಣ ಅಲ್ಲಲ್ಲಿ ವಿದ್ಯುತ್ ಕಾಮಗಾರಿಯ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗಲಿದೆ. ಆದ್ದರಿಂದ ಒಂದು ದಿನದ ಮಟ್ಟಿಗಾದರೂ ನೀರನ್ನು ಸಂಗ್ರಹ ಮಾಡಬೇಕು. ಇನ್ನು ಶುದ್ಧೀಕರಣ ಮಾಡಿದ ನೀರನ್ನು ಕಾರು ತೊಳೆಯಲು, ರಸ್ತೆ, ಕಟ್ಟಡ ಕಾಮಗಾರಿಗೆ ಬಳಕೆ ಮಾಡಬಾರದು ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.ಹಳ್ಳಿಗಳಲ್ಲೂ ಉತ್ತಮ ಪರಿಸ್ಥಿತಿ: ತಾಲೂಕಿನಲ್ಲಿ ಒಟ್ಟು 108 ಹಳ್ಳಿಗಳಿವೆ. ಆ ಪೈಕಿ 78 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 13 ಹಳ್ಳಿಗಳಿಗೆ ಬ್ಯಾಡಗಿ ತಾಲೂಕಿನ ಆಣೂರ ಯೋಜನೆ ಮೂಲಕ 3- 4 ತಿಂಗಳಲ್ಲಿ ಪೂರೈಸುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ನಾಲ್ಕೈದು ಹಳ್ಳಿಗಳಲ್ಲಿ (ಸುಣಕಲ್ಲಬಿದರಿ, ಜೋಯಿಸರಹರಳಹಳ್ಳಿ, ಹೆಡಿಯಾಲ, ಬಿಲ್ಲಹಳ್ಳಿ, ಹನುಮಾಪುರ, ಗೋಡಿಹಾಳ) ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗಹುದು ಎಂದು ನಿರೀಕ್ಷಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, 8 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ನೀರಿನ ತೊಂದರೆ ಉಂಟಾದರೆ ಅವುಗಳಿಂದ ನೀರು ಪೂರೈಸಲಾಗುತ್ತದೆ.ನದಿಯಲ್ಲಿ ನೀರಿನ ಮೂಲ: ಬೇಸಿಗೆ ಅವಧಿಯಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ನದಿಯಲ್ಲಿ ನೀರಿನ ಮೂಲವಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದು, ಆದರೆ ಸಾರ್ವಜನಿಕರು ನೀರನ್ನು ಮಿತಿಯಿಂದ ಬಳಕೆ ಮಾಡಬೇಕಿದೆ ಎಂದು ರಾಣಿಬೆನ್ನೂರಿನ ನಗರಸಭೆ ಪೌರಾಯುಕ್ತ ಫಕ್ಕಿರಪ್ಪ ಇಂಗಳಗಿ ತಿಳಿಸಿದರು.
ಖಾಸಗಿ ಬೋರವೆಲ್: ಗ್ರಾಮೀಣ ಭಾಗದಲ್ಲಿ ಸದ್ಯ ನೀರಿನ ಸಮಸ್ಯೆಯಿಲ್ಲ. ಬೇಸಿಗೆ ಸಮಯದಲ್ಲಿ ಐದು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿ ಎದುರಾದಲ್ಲಿ ಖಾಸಗಿ ಬೋರವೆಲ್‌ಗಳ ಮೂಲಕ ನೀರು ಪೂರೈಸಲಾಗುವುದು ಎಂದು ರಾಣಿಬೆನ್ನೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎ. ಜಯರಾಂ ತಿಳಿಸಿದರು.