ಅಜೀಜಅಹ್ಮದ್ ಬಳಗಾನೂರ
ಹುಬ್ಬಳ್ಳಿ: ಇಲ್ಲಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಫೆ. 24ರಂದು ನಡೆಯಲಿರುವ ರಣಜಿ ಫೈನಲ್ ಪಂದ್ಯದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಭಾನುವಾರ ಉಭಯ ತಂಡಗಳ ಆಟಗಾರರು 3 ಗಂಟೆಗೂ ಹೆಚ್ಚು ಕಾಲ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದರು.ನಗರದ ಕೆಎಸ್‌ಸಿಎ ಮೈದಾನದಲ್ಲಿ ಇಲ್ಲಿಯ ವರೆಗೆ ರಣಜಿ ಟ್ರೋಫಿ ಲೀಗ್, ಕೆಪಿಎಲ್, ಇಂಡಿಯಾ ಎ ಗುಂಪಿನ ಆಟಕ್ಕೆ ಮಾತ್ರ ಸೀಮಿತವಾಗಿತ್ತು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಣಜಿ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿರುವುದು ಉತ್ತರ ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದ್ದು, ಪಂದ್ಯ ವೀಕ್ಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಆತಿಥೇಯ ಕರ್ನಾಟಕ ಮತ್ತು ಜಮ್ಮು- ಕಾಶ್ಮೀರ ನಡುವಣ ರಣಜಿ ಅಂತಿಮ ಹಣಾಹಣಿ ಮಂಗಳವಾರದಿಂದ ನಡೆಯಲಿದೆ. ಈಗಾಗಲೇ ಉಭಯ ತಂಡದ ಆಟಗಾರರು ಹುಬ್ಬಳ್ಳಿಗೆ ಬಂದಿಳಿದಿದ್ದು, ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಜಮ್ಮು- ಕಾಶ್ಮೀರ ತಂಡದ ಶುಭಂ ಕಜರಿಯಾ, ಶುಭಂ ಪುಂಡರಿ, ಯಾವಿರಾ ಹಸನ್, ದೀಕ್ಷಾಂತ ಕುಂಡಲಾ, ಕನ್ನಯ್ಯ ಸೇರಿದಂತೆ ತಂಡದ ಸದಸ್ಯರು ಎರಡನೇ ದಿನವೂ ಬ್ಯಾಟಿಂಗ್, ಬೌಲಿಂಗ್ ಅಭ್ಯಾಸ ಮುಂದುವರಿಸಿದರು. ಭಾನುವಾರ ಬೆಳಗ್ಗೆಯಷ್ಟೇ ಹುಬ್ಬಳ್ಳಿಗೆ ಬಂದಿಳಿದ ಆತಿಥೇಯ ಕರ್ನಾಟಕ ತಂಡದ ಆಟಗಾರರೂ ಮಧ್ಯಾಹ್ನದಿಂದ ಸಂಜೆಯ ವರೆಗೂ ನೆಟ್ ಪ್ರ್ಯಾಕ್ಟಿಸ್ ಜತೆಗೆ ವ್ಯಾಯಾಮ ಮಾಡಿದರು. ಈ ವೇಳೆ ತಂಡದ ತರಬೇತುದಾರರು ಆಟಗಾರರಿಗೆ ತಂತ್ರಗಾರಿಕೆ ತಿಳಿಸಿಕೊಟ್ಟರು. ಆನಂತರ ಕೆಲಹೊತ್ತು ಮೈದಾನದಲ್ಲಿ ಫುಟ್‌ಬಾಲ್ ಆಡುವ ಮೂಲಕ ಗಮನ ಸೆಳೆದರು.ಈಗಾಗಲೇ ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್, ಮಯಾಂಕ್ ಅಗರವಾಲ್, ಆರ್. ಸ್ಮರಣ್, ಶ್ರೇಯಸ್ ಗೋಪಾಲ, ಕರುಣ್ ಅಯ್ಯರ್ ಸೇರಿ ಬಹುತೇಕ ಆಟಗಾರರು ಬಂದಿದ್ದಾರೆ. ಇನ್ನುಳಿದ ಸ್ಟಾರ್ ಆಟಗಾರರ ಪೈಕಿ ಕೆ.ಎಲ್. ರಾಹುಲ್, ಪ್ರಸಿದ್ಧ ಕೃಷ್ಣ ಸೋಮವಾರ ಬೆಳಗ್ಗೆ ಹುಬ್ಬಳ್ಳಿಗೆ ಬಂದಿಳಿಯಲಿದ್ದು, ಮಧ್ಯಾಹ್ನ ಮೈದಾನಕ್ಕೆ ಬರುವ ಸಾಧ್ಯತೆ ಇದೆ. 10 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ನಿರೀಕ್ಷೆಇದೇ ಪ್ರಥಮ ಬಾರಿಗೆ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ರಣಜಿ ಫೈನಲ್ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈದಾನ ಸಜ್ಜುಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ. ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಸಕ್ತರು, ಕ್ಲಬ್‌ನ ವಿದ್ಯಾರ್ಥಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬರುವ ನಿರೀಕ್ಷೆ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಆಸನ ಹಾಗೂ ಪೆಂಡಾಲ್ ವ್ಯವಸ್ಥೆ ಕಲ್ಪಿಸುವ ಕಾರ್ಯ ಮುಂದುವರಿದಿದೆ. ಭಾನುವಾರವೂ ಸಿಬ್ಬಂದಿ ಆಸನಗಳ ವ್ಯವಸ್ಥೆಗೆ ಬೇಕಾದ ಸಿದ್ಧತೆ ಮಾಡುತ್ತಿರುವುದು ಕಂಡುಬಂದಿತು. ಜತೆಗೆ ಆಟಗಾರರಿಗೆ ಮೈದಾನದಲ್ಲಿ ಸೂಕ್ತ ಭದ್ರತೆ ಒದಗಿಸುವುದು, ಪಂದ್ಯ ನಡೆಸಲು ಸೂಕ್ತ ಬಂದೋಬಸ್ತ್ ಕಲ್ಪಿಸಲು ಪೊಲೀಸರು ಅಗತ್ಯ ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿತು.