ರಂಜಿನಾ ತಳಗೇರಿ ಕಾರ್ಯ ಶ್ಲಾಘನೀಯ: ಬಿ. ಬಾಬು

| Published : Sep 10 2024, 01:32 AM IST

ಸಾರಾಂಶ

ತಾಲೂಕಿನಾದ್ಯಂತ ಬಿಸಿಯೂಟದ ಕಾರ್ಯಕರ್ತರಿಗೆ ಎಲ್ಲಿಯೇ ಯಾವುದೇ ರೀತಿಯ ತೊಂದರೆ ಆದರೂ ತಕ್ಷಣವೇ ಅಲ್ಲಿಗೆ ತೆರಳಿ ಪರಿಹರಿಸಿ ಬರುತ್ತಿದ್ದರು ಎಂದು ಎಐಟಿಯುಸಿ ಗೌರವಾಧ್ಯಕ್ಷ ಬಿ. ಬಾಬು ಹೇಳಿದರು.

ಮುಂಡರಗಿ: ಸುಮಾರು 6 ವರ್ಷಗಳ ಕಾಲ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವ ಮೂಲಕ ರಂಜನಾ ತಳಗೇರಿಯವರು ಯೋಜನೆ ಅಡಿ ಕಾರ್ಯನಿರ್ವಹಿಸುವ ಎಲ್ಲ ಅಡುಗೆದಾರರಿಗೂ ಶಿಸ್ತಿನ ಪಾಠ ಕಲಿಸಿದ್ದಾರೆ ಎಂದು ತಾಲೂಕು ಎಐಟಿಯುಸಿ ಗೌರವಾಧ್ಯಕ್ಷ ಬಿ. ಬಾಬು ಹೇಳಿದರು.

ಭಾನುವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫಡರೇಶನ್ ವತಿಯಿಂದ ಮುಂಡರಗಿ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ರಂಜಿನಾ ತಳಗೇರಿಯವರ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.

ತಾಲೂಕಿನಾದ್ಯಂತ ಬಿಸಿಯೂಟದ ಕಾರ್ಯಕರ್ತರಿಗೆ ಎಲ್ಲಿಯೇ ಯಾವುದೇ ರೀತಿಯ ತೊಂದರೆ ಆದರೂ ತಕ್ಷಣವೇ ಅಲ್ಲಿಗೆ ತೆರಳಿ ಪರಿಹರಿಸಿ ಬರುತ್ತಿದ್ದರು. ಅಲ್ಲದೇ ಬಿಸಿಯೂಟದ ಕಾರ್ಯಕರ್ತರಿಗೆ ಕಾಲಕಾಲಕ್ಕೆ ತರಬೇತಿ ನಡೆಸುವ ಮೂಲಕ ಸರ್ಕಾರದ ನಿಯಮಾವಳಿಗಳನ್ನು ತಿಳಿಸಿ ಅವರಿಂದ ಉತ್ತಮವಾಗಿ ಕೆಲಸ ತೆಗೆದುಕೊಳ್ಳುತ್ತಿದ್ದರು. ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದರು.ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಎಸ್.ಡಿ. ಕನವಳ್ಳಿ ಮಾತನಾಡಿ, ಸರ್ಕಾರ ಅಕ್ಷರದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುವ ಅಡುಗೆದಾರರಿಗೆ 60 ವರ್ಷದ ನಂತರ ಇಡಿಗಂಟು ಇಡಲು ನಿರ್ಧರಿಸಿದ್ದು, ಅಡುಗೆದಾರರ ಜೀವನಕ್ಕೆ ಆಸರೆಯಾಗಲಿದೆ. ಬಿಸಿಯೂಟ ತಯಾರಿಕಾ ಕಾರ್ಯ ನಿಮ್ಮ ಸಂಸಾರಿಕ ಜೀವನಕ್ಕೆ ಸಹಕಾರಿಯಾಗಿದೆ. ರಂಜಿತಾ ತಳಗೇರಿ 6 ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿ ಮುಂಡರಗಿ ತಾಲೂಕಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದ್ದಾರೆ. ಮುಂದೆ ಬರುವ ಅಧಿಕಾರಿಗಳಿಗೂ ನಿಮ್ಮ ಸಹಕಾರ ಹೀಗೆ ಇರಲಿ ಎಂದರು.

ಪ್ರೊ. ಆಸ್ಮಾಬೇಗಂ ಮಾತನಾಡಿ, ರಂಜಿತಾ ತಳಗೇರಿ ಕೇವಲ ಅಕ್ಷರ ದಾಸೋಹ ಯೋಜನೆಯಲ್ಲಿ ಮಾತ್ರವಲ್ಲ, ಗ್ರಾಪಂ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿಯೂ ಸರ್ಕಾರ ತಮಗೆ ನೀಡಿದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಯಶಸ್ವಿಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಮಕ್ಕಳಿಗೆ ಪಡಿತರ ತಲುಪಿಸುವ ಮೂಲಕ ಸರ್ಕಾರದ ಕಾರ್ಯವನ್ನು ನಿಯಮಾನುಸಾರ ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಸನ್ಮಾನ ಸ್ವೀಕರಿಸಿ ರಂಜಿತಾ ತಳಗೇರಿ ಮಾತನಾಡಿ, ಮುಂಡರಗಿ ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಅಡುಗೆದಾರರು ಹಾಗೂ ಸಹಾಯಕ ಅಡುಗೆದಾರರು ಸೇರಿದಂತೆ ಎಲ್ಲರೂ ಉತ್ತಮವಾಗಿ ಪ್ರಾಮಾಣಿಕತನದಿಂದ ತಮ್ಮ ತಮ್ಮ ಕಾರ್ಯ ನಿರ್ವಹಿಸುತ್ತಿರುವುದರಿಂದ ನಾನು ಯಾವುದೇ ತೊಂದರೆ ಇಲ್ಲದೇ 6 ವರ್ಷಗಳ ಕಾಲ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಅವರೆಲ್ಲರ ಸಹಕಾರವೇ ನನ್ನ ಯಶಸ್ವಿ ಕಾರ್ಯಕ್ಕೆ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಶಾಂತಾ ನಾಯಕ ಸೇರಿದಂತೆ ಅನೇಕ ಅಡುಗೆದಾರರು ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಅಡುಗೆದಾರರು ಹಾಗೂ ಅಡುಗೆ ಸಹಾಯಕರು ಉಪಸ್ಥಿತರಿದ್ದರು.