ಸಾರಾಂಶ
ಕುಮಟಾ: ಇಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಡಿಯಲ್ಲಿ ಅರಣ್ಯವಾಸಿಗಳು ಅರಣ್ಯ ಅಧಿಕಾರಿಗಳೊಂದಿಗೆ ಅರಣ್ಯ ಹಕ್ಕು ಕುರಿತು ಸಭೆ ನಡೆಸಿ ಚರ್ಚಿಸಿದರು. ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳ ಮೇಲೆ ಕಾನೂನುಬಾಹಿರವಾಗಿ ಅರಣ್ಯ ಸಿಬ್ಬಂದಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಆತಂಕ ಮತ್ತು ಕಿರುಕುಳ ನೀಡುತ್ತಿರುವುದನ್ನು ಪ್ರಸ್ತಾಪಿಸಲಾಯಿತು.ಹೋರಾಟಗಾರರ ವೇದಿಕೆಯ ಸಂಚಾಲಕಿ ರಂಜಿತಾ ರವೀಂದ್ರ, ಅರಣ್ಯ ಇಲಾಖೆಯವರು ಅತಿಕ್ರಮಣದಾರ ಕುಟುಂಬದ ಪುರುಷರು ಮನೆಯಲ್ಲಿ ಇಲ್ಲದಿದ್ದಾಗ ಬೇಲಿ ಕೀಳುವುದು, ಗಿಡ ಕಿತ್ತುವ ಕಾರ್ಯ ಮಾಡುತ್ತಾರೆ. ನೋಟಿಸ್ ಕೊಡುವುದಿಲ್ಲ, ಸಮಯಾವಕಾಶ ನೀಡುವುದಿಲ್ಲ. ಮಹಿಳೆಯರಷ್ಟೇ ಇದ್ದಾಗ ಅರಣ್ಯ ಸಿಬ್ಬಂದಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುವುದು ಯಾಕೆ ಎಂದು ಪ್ರಶ್ನಿಸಿದರು. ವೇದಿಕೆಯ ಅಧ್ಯಕ್ಷ ಎ. ರವೀಂದ್ರ ನಾಯ್ಕ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ಪುನರ್ ಪರಿಶೀಲನಾ ಹಂತದಲ್ಲಿ ಇರುವ, ಜಿಪಿಎಸ್ ಮೇಲ್ಮನವಿ ಉರ್ಜಿತ ಇರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಅರಣ್ಯ ಸಿಬ್ಬಂದಿಗಳಿಂದ ಆತಂಕ ಉಂಟಾಗುತ್ತಿದೆ ಎಂದರು. ಈ ಬಗ್ಗೆ ಅರಣ್ಯ ಅಧಿಕಾರಿಗಳು ಲಿಖಿತ ಉತ್ತರ ನೀಡಬೇಕು ಎಂದು ಸಭೆಯಲ್ಲಿ ಅರಣ್ಯವಾಸಿಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಹೊನ್ನಾವರ ಡಿಎಫ್‌ಒ ಯೋಗೇಶ ಸಿ.ಕೆ. ಅವರು ಒಂದು ವಾರದಲ್ಲಿ ಲಿಖಿತ ಉತ್ತರ ನೀಡುತ್ತಾರೆಂಬ ಭರವಸೆ ನೀಡಲಾಯಿತು. ಸಭೆಯಲ್ಲಿ ಎಸಿಎಫ್ ಯೋಗೀಶ, ಆರ್‌ಎಫ್ಒ ಪ್ರವೀಣ ನಾಯಕ, ವಿನೋದ ನಾಯ್ಕ, ಪ್ರೀತಿ ನಾಯ್ಕ, ರಾಜೀವ ನಾಯಕ ಇತರರು ಇದ್ದರು. ಸಭೆಯಲ್ಲಿ ಗಜಾನನ ಹೆಗಡೆ, ಯಾಕೂಬ ಸಾಬ, ಮಹೇಂದ್ರ ನಾಯ್ಕ ಕತಗಾಲ, ವೀರಭದ್ರ ನಾಯ್ಕ, ರಾಘವೇಂದ್ರ ಕಂವಚೂರು, ಶುಕೂರ್ ಸಾಬ, ಸೀತಾರಾಮ ನಾಯ್ಕ, ಅಬ್ದುಲ್ ಶುಕೂರ್, ಸದಾನಂದ ಹರಿಕಾಂತ, ಜಗದೀಶ ನಾಯ್ಕ, ಅರವಿಂದ ನಾಯ್ಕ ಇತರರು ಇದ್ದರು.