ಗಡಿನಾಡಿನಲ್ಲಿ ಕನ್ನಡಕ್ಕಾಗಿ ರಾವ್ ಬಹದ್ದೂರ್ ಅವಿರತ ಶ್ರಮ: ಜಾನೆಕುಂಟೆ ಬಸವರಾಜ್

| Published : Nov 13 2024, 12:03 AM IST

ಗಡಿನಾಡಿನಲ್ಲಿ ಕನ್ನಡಕ್ಕಾಗಿ ರಾವ್ ಬಹದ್ದೂರ್ ಅವಿರತ ಶ್ರಮ: ಜಾನೆಕುಂಟೆ ಬಸವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬೆಳವಣಿಗೆಗೆ ಮಹಾಬಲೇಶ್ವರಪ್ಪನವರು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಜಾನೆಕುಂಟೆ ಬಸವರಾಜ್ ಹೇಳಿದ್ದಾರೆ.

ಬಳ್ಳಾರಿ: ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಣ ಹಾಗೂ ಸಮಾಜಸೇವೆಗಾಗಿ ತಮ್ಮ ಇಡೀ ಬದುಕನ್ನು ಸವೆಸಿದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ್ ಅವರು, ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬೆಳವಣಿಗೆಗೆ ಮಹಾಬಲೇಶ್ವರಪ್ಪನವರು ಅಪಾರವಾದ ಕೊಡುಗೆ ನೀಡಿದ್ದಾರೆ. ಗಡಿಭಾಗಗಳಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿ ಸಹಸ್ರಾರು ಜನರಿಗೆ ಶಿಕ್ಷಣ ನೀಡಿದ ಅವರ ಬದುಕು ರೂಪಿಸಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿಯು ಒಂದು ಐತಿಹಾಸಿಕ ಪ್ರದೇಶವಾಗಿದ್ದರೂ ಶೈಕ್ಷಣಿಕವಾಗಿ ಮುಂದುವರಿಯದ ಸಂದರ್ಭದಲ್ಲಿ ಈ ಭಾಗದ ಶಿಕ್ಷಣದ ಉನ್ನತಿಗೆ ಹಾಗೂ ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ತಮ್ಮ ಸಾಕ್ಷಿಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ.

ವೈ.ಮಹಾಬಲೇಶ್ವರಪ್ಪನವರು ಕನ್ನಡದ ಪ್ರಸಿದ್ಧ ಕವಿ ವೈ. ನಾಗೇಶ ಶಾಸ್ತ್ರಿಗಳ ಒಡನಾಡಿಯಾಗಿ ಕನ್ನಡ ಕಾವ್ಯಗಳ ಸಹಜ ಸುಂದರತೆಯನ್ನು ಆಸ್ವಾದಿಸುವ ಗುಣವೂ ಇವರಲ್ಲಿತ್ತು. ಸ್ವತಃ ಶಿಕ್ಷಣ, ಸಾಹಿತ್ಯ ಪ್ರೇಮಿಯಾಗಿ ಲಲಿತ ಕಲೆಗಳ ಆರಾಧಕನಾಗಿ, ಮಹಿಳಾ ಸಮಾಜದ ಹಿತ ಚಿಂತಕರಾಗಿ, ತಮ್ಮ ಸಮಾಜಮುಖಿ ಚಿಂತನೆಯಿಂದ‘ಕರ್ಮಯೋಗಿ’ಎನಿಸಿದ್ದಾರೆ.

ಬಳ್ಳಾರಿಯಲ್ಲಿ ಏಕೀಕರಣ ಚಳವಳಿಗೆ ಸ್ಫೂರ್ತಿ ಮತ್ತು ತೀವ್ರತೆ ಕೊಟ್ಟವರಲ್ಲಿ ಇವರೂ ಪ್ರಮುಖರಾಗಿದ್ದಾರೆ. ಕೇವಲ 25 ವರ್ಷ ತುಂಬಿದ ಯುವಕರಾಗಿದ್ದ ಅವರು ಬಳ್ಳಾರಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಬಂದದ್ದು, ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಶಾಲೆಯನ್ನು ತೆರೆಯುವುದರ ಮೂಲಕ ಕನ್ನಡ ಭಾಷೆಗೆ ಭದ್ರ ಬುನಾದಿ ಹಾಕಿದರು ಎಂದು ಸ್ಮರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ ಅವರು ಮಾತನಾಡಿ, ವಿದ್ಯಾಭಿಮಾನಿಯಾಗಿದ್ದ ಮಹಾಬಲೇಶ್ವರಪ್ಪನವರು ವಿದ್ಯಾಕೇಂದ್ರಗಳನ್ನು ತೆರೆಯುವಾಗ ಅನೇಕ ಸಂಕಷ್ಟಗಳು ಎದುರಾದರೂ ಅದ್ಯಾವುದನ್ನು ಲೆಕ್ಕಿಸದೆ ಕನ್ನಡದ ಮಗನಾಗಿ ಅವಿರತವಾಗಿ ಕನ್ನಡಕ್ಕಾಗಿ ದುಡಿದರು ಎಂದು ತಿಳಿಸಿದರು.

ಎನ್‌ಸಿಸಿ ಹಿರಿಯ ಅಧಿಕಾರಿ ರಾಹುಲ್‌ಸಿಂಗ್, ಸುಬೇದಾರ್ ಮೇಜರ್ ದೇವೇಂದ್ರಕುಮಾರ್, ಉಪಪ್ರಾಂಶುಪಾಲರಾದ ಡಾ. ಸವಿತಾ ಸೋನಾಲಿ ಮತ್ತು ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಂಗಾಮಹೇಶ ಸಜ್ಜನ್ ಕಾರ್ಯಕ್ರಮ ನಿರ್ವಹಿಸಿದರು.