ಸಾರಾಂಶ
8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆಗೈದ ಅಪರಾಧಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ಗಲ್ಲು ಶಿಕ್ಷೆ ಹಾಗೂ ₹45 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆಗೈದ ಅಪರಾಧಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ಗಲ್ಲು ಶಿಕ್ಷೆ ಹಾಗೂ ₹45 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಬಾಲಕಿಯ ತಂದೆ-ತಾಯಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹10 ಲಕ್ಷ ಪರಿಹಾರ ನೀಡಲು ಆದೇಶಿಸಿದೆ. ರಾಯಬಾಗ ತಾಲೂಕಿನ ಭರತೇಶ ರಾವಸಾಬ್ ಮಿರ್ಜಿ (28) ಶಿಕ್ಷೆಗೊಳಗಾದ ವ್ಯಕ್ತಿ.ಘಟನೆಯ ಹಿನ್ನೆಲೆ:
2019ರ ಅಕ್ಟೋಬರ್ 15ರಂದು ಸಂಜೆ ಬಾಲಕಿ ಚಾಕೊಲೇಟ್ ತರಲು ಅಂಗಡಿಗೆ ಹೋಗಿದ್ದಳು. ಮರಳಿ ಮನೆಗೆ ಬರುವಾಗ ಅಪರಾಧಿ ಭರತೇಶ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಾಲಕಿ ಚೀರಾಟ ಆರಂಭಿಸಿದಾಗ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಕಲ್ಲುಕಟ್ಟಿ ಮೃತದೇಹವನ್ನು ಮನೆ ಬಳಿಯ ಬಾವಿಯೊಳಗೆ ಬಿಸಾಕಿದ್ದ. ಹೊಲಕ್ಕೆ ಹೋಗಿದ್ದ ಬಾಲಕಿಯ ತಂದೆ ಮರಳಿ ಮನೆಗೆ ಬಂದು ಎಲ್ಲ ಕಡೆ ಹುಡುಕಾಡಿದರೂ ಮಗಳು ಪತ್ತೆಯಾಗದೇ ಇದ್ದಾಗ ಕುಡಚಿ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪಿಎಸೈ ಜಿ.ಎಸ್.ಉಪ್ಪಾರ ಅವರು ಬೆಳಗಾವಿಯಿಂದ ಶ್ವಾನದಳ ಕರೆಸಿ ಶೋಧ ನಡೆಸಿದಾಗ ಶ್ವಾನಗಳು ಬಾಲಕಿ ನಡೆದು ಹೋದ ದಾರಿ ಹಾಗೂ ಆರೋಪಿಯ ಮನೆ ಮುಂದೆ ನಿಂತು ಸುತ್ತಾಡಿ ಬಾವಿಯ ಕಡೆ ಬಳಿ ಹೋಗಿ ನಿಂತಿದ್ದವು. ಪೊಲೀಸರು ಕ್ಯಾಮೆರಾ ಇಳಿಸಿ ತಪಾಸಣೆ ನಡೆಸಿದಾಗ ಬಾಲಕಿಯ ಬೆರಳು ಕಂಡುಬಂದಿದ್ದವು. ಬಳಿಕ 6 ಮೋಟಾರ್ ಬಳಸಿ ಬಾವಿಯ ನೀರು ಹೊರತೆಗೆದು ಶೋಧ ನಡೆಸಿದಾಗ ಬಾಲಕಿಯ ಕಂಡುಬಂದಿತ್ತು. ಶವ ಹೊರತೆಗೆದು ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದಾಗ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡ ತನಿಖಾಧಿಕಾರಿ ಜಿ.ಎಸ್.ಉಪ್ಪಾರ ಅವರು ಅತ್ಯಾಚಾರಿ ಭರತೇಶನನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಸೇರಿ ಅಗತ್ಯ ಪುರಾವೆ, ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಿದ್ದರು. ಮುಂದಿನ ದಿನಗಳಲ್ಲಿ ಎನ್.ಮಹೇಶ ಮತ್ತು ಕೆ.ಎಸ್.ಹಟ್ಟಿ ತನಿಖೆ ಮಾಡಿ ಬೆಳಗಾವಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು 20 ಸಾಕ್ಷಿಗಳ ವಿಚಾರಣೆ ಹಾಗೂ 106 ದಾಖಲೆ ಮತ್ತು 22 ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಿ ಮೇಲಿನ ಆರೋಪ ಸಾಬೀತಾಗಿದ್ದು, ಅಪರಾಧಿ ಭರತೇಶ ರಾವಸಾಬ ಮಿರ್ಜಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.