ಸಾರಾಂಶ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಅಯ್ಯಪ್ಪಸ್ವಾಮಿ ವ್ರತಾಚರಣೆಯ ಮಾಲೆ ಧಾರಣೆ ಮಾಡಿದ ವಿದ್ಯಾರ್ಥಿಯೊಬ್ಬನನ್ನು ಪ್ರಾಚಾರ್ಯರು ಕಾಲೇಜಿನಿಂದ ಹೊರ ಹಾಕಿದ ಆರೋಪ ಕೇಳಿಬಂದಿದೆ. ಆದರೆ ಕಾಲೇಜು ಪ್ರಾಚಾರ್ಯ ಇದನ್ನು ನಿರಾಕರಿಸಿದ್ದಾರೆ.ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿವಕುಮಾರ್ ಅಯ್ಯಪ್ಪಸ್ವಾಮಿ ವ್ರತಾಚರಣೆಯ ಮಾಲೆ ಧಾರಣೆ ಮಾಡಿದ್ದು, ಗುರುವಾರ ಎಂದಿನಂತೆ ಕಾಲೇಜಿಗೆ ತೆರಳಿದ್ದಾಗ ಪ್ರಾಚಾರ್ಯ ಕೃಷ್ಣಮೂರ್ತಿ ವಿದ್ಯಾರ್ಥಿಗೆ, ‘ಕಾಲೇಜಿಗೆ ಬರುವುದಾದರೆ ಶಾಲು ತೆಗೆದು ತರಗತಿಗೆ ಬಾ. ನಿಮ್ಮಂತಹ ವಿದ್ಯಾರ್ಥಿಗಳೇ ಕಾಲೇಜಿನಲ್ಲಿ ಜಾತಿ, ಧರ್ಮ ಎಂದು ಹುಟ್ಟು ಹಾಕುವುದು. ಈ ಬಗ್ಗೆ ಯಾರಿಗಾದರೂ ಹೇಳುವುದಾದರೆ ಹೇಳು. ನಿನ್ನನ್ನು ಕಾಲೇಜಿನಿಂದ ಡಿಬಾರ್ ಮಾಡುತ್ತೇನೆ’ ಎಂದು ಹೇಳಿ ಕಾಲೇಜಿನ ಆವರಣದ ಒಳಗೆ ಸಹ ನಿಲ್ಲಲು ಅವಕಾಶ ನೀಡದೆ ಹೊರಹಾಕಿದ್ದಾರೆ ಎಂದು ವಿದ್ಯಾರ್ಥಿ ಶಿವಕುಮಾರ್ ಆರೋಪಿಸಿದ್ದಾರೆ.
‘ನನ್ನನ್ನು ಕಾಲೇಜಿನಿಂದ ಹೊರ ಕಳುಹಿಸಿದ ಬಳಿಕ ನಾನು ಕೆಲವರಿಗೆ ವಿಷಯ ತಿಳಿಸಿದ್ದು, ಪರಿಚಯಸ್ಥರು ಕಾಲೇಜು ಆಡಳಿತ ಮಂಡಳಿಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಸ್ಥಳಕ್ಕೆ ಪೊಲೀಸರು ಬಂದು ಪ್ರಾಚಾರ್ಯರಿಗೆ ಬುದ್ಧಿ ಹೇಳಿದ ಬಳಿಕ ತಮ್ಮ ವರಸೆಯನ್ನು ಬದಲು ಮಾಡಿ ಶಾಲನ್ನು ತೆಗೆಯಲು ನಾನು ಹೇಳಿಲ್ಲ. ಸೊಂಟಕ್ಕೆ ಕಟ್ಟಿಕೊಳ್ಳಲು ಹೇಳಿದ್ದೇನೆ ಅಷ್ಟೇ ಎಂದು ನನ್ನನ್ನು ತರಗತಿಗೆ ಸೇರಿಸಿದ್ದಾರೆ’ ಎಂದು ವಿದ್ಯಾರ್ಥಿ ಶಿವಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.ಕಾಲೇಜಿನ ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಈ ಕುರಿತು ಪ್ರತಿಕ್ರಿಯಿಸಿ, ‘ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಸಂಹಿತೆಯಿದೆ. ಈ ಹಿಂದೆ ಹಿಜಾಬ್ ಮತ್ತು ಕೇಸರಿ ಶಾಲಿನ ಕುರಿತು ಗೊಂದಲ ನಡೆದಿತ್ತು, ಅದಕ್ಕಾಗಿ ನಾನು ಕಾಲೇಜು ವೇಳೆಯಲ್ಲಿ ವಿದ್ಯಾರ್ಥಿಯ ಹೆಗಲ ಮೇಲಿದ್ದ ಕಪ್ಪು ಶಾಲನ್ನು ಮಾತ್ರ ತೆಗೆದು ಬ್ಯಾಗಿನೊಳಗೆ ಇಡುವಂತೆ ಸೂಚಿಸಿದ್ದೆ. ವಿದ್ಯಾರ್ಥಿಯನ್ನು ತರಗತಿಯಿಂದ ಹೊರ ಹಾಕಿಲ್ಲ. ಅಯ್ಯಪ್ಪಸ್ವಾಮಿ ಮಾಲೆಯನ್ನು ತೆಗೆಯಲು ಸಹ ಹೇಳಿಲ್ಲ. ಆತ ಇಂದು ಕಾಲೇಜಿನ ಎಲ್ಲಾ ತರಗತಿಗಳಿಗೂ ಹಾಜರಾಗಿದ್ದಾನೆ. ವಿದ್ಯಾರ್ಥಿಯ ಆರೋಪ ಸುಳ್ಳು’ ಎಂದು ಹೇಳಿದ್ದಾರೆ.
ಈ ಹಿಂದೆಯೂ ಸಹ ಹಲವು ವಿದ್ಯಾರ್ಥಿಗಳು ಮಾಲೆ ಧರಿಸಿ ಕಾಲೇಜಿಗೆ ಬಂದಿದ್ದು, ನಾವು ಯಾರಿಗೂ ತೊಂದರೆ ಮಾಡಿಲ್ಲ. ಕಾಲೇಜಿನ ನಿಯಮದಂತೆ ಅವರು ತರಗತಿಗಳಿಗೆ ಹಾಜರಾಗುತ್ತಿದ್ದರು ಎಂದು ಹೇಳಿದರು.ಬಾಳೆಹೊನ್ನೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಮಾಲೆ ಧರಿಸಿದ ವಿದ್ಯಾರ್ಥಿಗೆ ಪ್ರಾಚಾರ್ಯರು ತರಗತಿಯಿಂದ ಹೊರ ಹಾಕಿದ ಘಟನೆ ಅತ್ಯಂತ ಬೇಸರದ ಸಂಗತಿ. ಅಯ್ಯಪ್ಪಸ್ವಾಮಿ ಮಾಲೆ ಧಾರಣೆ ಎಂಬುದು ಯಾವುದೋ ಪಕ್ಷ, ಜಾತಿಗೆ ಸೀಮಿತವಲ್ಲ. ಇಲ್ಲಿ ಯಾವುದೇ ರಾಗ, ದ್ವೇಷಗಳಿಲ್ಲ. ಅಯ್ಯಪ್ಪ ವ್ರತಾಚರಣೆ ಎಂಬುದು ಸಾತ್ವಿಕ ಮನಸ್ಸಿನ ಸಂಕೇತವಾಗಿದ್ದು, ಇಡೀ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಮಾಡುವುದಾಗಿದೆ. ಇಲ್ಲಿ ಯಾವುದೇ ಪಕ್ಷ, ಜಾತಿ ಬೇಧಗಳಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಸಹ ಅಯ್ಯಪ್ಪನ ಭಕ್ತರಾಗಿದ್ದಾರೆ. ಘಟನೆ ಬಗ್ಗೆ ಪೊಲೀಸರು, ಆಡಳಿತ ಮಂಡಳಿ ಮದ್ಯಪ್ರವೇಶಿಸಿದ ಬಳಿಕ ಪ್ರಾಚಾರ್ಯರಿಗೆ ತಮ್ಮ ತಪ್ಪಿನ ಅರಿವಾಗಿ ವಿದ್ಯಾರ್ಥಿಯನ್ನು ತರಗತಿಗೆ ಸೇರಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಲ್ಲೂ ಇಂತಹ ಘಟನೆ ನಡೆಯಬಾರದು.
ಬಿ.ಜಗದೀಶ್ಚಂದ್ರ, ಅಯ್ಯಪ್ಪ ಮಾಲಾಧಾರಿ.;Resize=(128,128))
;Resize=(128,128))
;Resize=(128,128))
;Resize=(128,128))