ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಿಹಾರ ಮೂಲದ ಹಾಗೂ ಬೈರನಕುಂಟೆ ನಿವಾಸಿ ಮಹಮ್ಮದ್ ಜಹಂಗೀರ್ (43) ಬಂಧಿತ. ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರೆ ಹಾಗೂ ಆರೋಪಿ ಬಿಹಾರ ಮೂಲದವರಾಗಿದ್ದು, ನಗರದ ಬೈರನಕುಂಟೆಯಲ್ಲಿ ವಾಸವಾಗಿದ್ದರು. ಮಹಿಳೆಯ ಪತಿ ಹಾಗೂ ಆರೋಪಿ ಸ್ನೇಹಿತರಾಗಿದ್ದರು. ಆರೋಪಿಯ ಪತ್ನಿ ಬಿಹಾರದಲ್ಲಿದ್ದ ಕಾರಣ ಮಹಿಳೆ ಈತನ ಮನೆಗೆ ಬಂದು ಅಡುಗೆ ಮಾಡಿ ಕೊಟ್ಟು ಹೋಗುತ್ತಿದ್ದರು. ಆರೋಪಿಯು 2023ರ ನವೆಂಬರ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ. ನಂತರ ಆ ವಿಡಿಯೋ ತೋರಿಸಿ ಈ ವಿಚಾರ ಬಹಿರಂಗ ಪಡಿಸಿದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಅನಾರೋಗ್ಯದಿಂದ ಮಹಿಳೆ ಬಿಹಾರಕ್ಕೆ ತೆರಳಿದ್ದರು. ಮೂರು ವರ್ಷಗಳ ಬಳಿಕ ಮಹಿಳೆ ಮತ್ತೆ ಬೆಂಗಳೂರಿಗೆ ವಾಪಾಸ್ ಬಂದಿದ್ದಾರೆ. ಊಟ ಕೊಡಲು ಹೋದಾಗ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು ಇಲ್ಲದಿದ್ದರೆ ₹5 ಲಕ್ಷ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.