ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮುಸ್ಲಿಂ ಯುವತಿ ಪ್ರೇಮ ಪ್ರಕರಣದಲ್ಲಿ ಕೊಲೆಯಾಗಿರುವ ಹಿಂದೂ ಯುವಕನ ವಿರುದ್ಧವೇ ಈಗ ಪೋಕ್ಸೋ ಅಡಿ ಅತ್ಯಾಚಾರ ಕೇಸ್ ದಾಖಲಿಸಿದ್ದಲ್ಲದೇ ಇಡೀ ಕುಟುಂಬದವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇದಕ್ಕೆ ಕುಟುಂಬಸ್ಥರು ಸೇರಿ ರಾಜಕೀಯ ಮುಖಂಡರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.ಕೊಲೆಯಾದ ಆರೋಪಿಯನ್ನೇ ಪೋಕ್ಸೋ ಕೇಸ್‌ನಲ್ಲಿ ಆರೋಪಿಯನ್ನಾಗಿ ಮಾಡಿರುವುದು ಸಹ ಇದೇ ಮೊದಲು ಎನ್ನಲಾಗಿದ್ದು, ಮೃತ ಗವಿಸಿದ್ದಪ್ಪ ಎ.1 ಆರೋಪಿಯಾಗಿದ್ದರೆ ಆತನ ತಂದೆ ನಿಂಗಜ್ಜ ಎ2, ತಾಯಿ ಎ3, ತಂಗಿಯನ್ನು ಎ4 ಆರೋಪಿಗಳನ್ನಾಗಿ ಮಾಡಲಾಗಿದೆ.
ತಾಯಿ ದೇವಮ್ಮ ಮಾತನಾಡಿ, ಮಗ ಕೊಲೆಯಾದ ಸಂಕಷ್ಟದಲ್ಲಿರುವ ನಮ್ಮ ಮೇಲೆಯೇ ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ?. ನನ್ನ ಮಗ ಪ್ರೀತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀ ಪಂಚಾಯಿತಿ ನಡೆದಾಗ ನಾನು ಮಾತ್ರ ಹೋಗಿದ್ದೆ. ಆದರೆ, ಈಗ ನನ್ನ ವಿರುದ್ಧ ಅಷ್ಟೇ ದೂರು ನೀಡದೆ, ನನ್ನ ಪತಿ ಮತ್ತು ನನ್ನ ಮಗಳ ಹೆಸರನ್ನು ಸೇರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.ಈಗ ನನ್ನ ಮಗ ಪ್ರೀತಿಸಿದ ಬಾಲಕಿಯ ತಾಯಿ ಪರಿಹಾರ ಕೇಳಿ ಧರಣಿ ಮಾಡಿದ್ದಾರೆ. ಅವರಿಗೆ ನನ್ನ ಮನೆಯನ್ನಾದರೂ ಮಾರಿ ಪರಿಹಾರ ನೀಡುತ್ತೇನೆ. ಅವರು ನನ್ನ ಮಗನನ್ನು ತಂದುಕೊಡಲಿ ಎಂದು ಸವಾಲು ಹಾಕಿದರು.
ತನಿಖೆ ಚುರುಕು:ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣದ ಜತೆಗೆ ಕೊಲೆಯಾದ ಗವಿಸಿದ್ದಪ್ಪ ನಾಯಕ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣವನ್ನು ರಾಜೀ ಮಾಡಿದ್ದು ಸಹ ಅಪರಾಧ ಆಗಿರುವುದರಿಂದ ಆ ದಿಸೆಯಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.ಕೊಪ್ಪಳದಲ್ಲಿ ಶಾಂತಿ ಕದಡಿದರೆ ಸರ್ಕಾರ ಹೊಣೆ: ವಿಜಯೇಂದ್ರ:ಗವಿಸಿದ್ದಪ್ಪ ನಾಯಕ ಹತ್ಯೆ ಪ್ರಕರಣ ಸಂಬಂಧ ಕೊಪ್ಪಳದಲ್ಲಿ ಶಾಂತಿ-ಸುವ್ಯವಸ್ಥೆ ಕದಡಿದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೆಲ ಮುಖಂಡರು ಎಂಥ ಕೀಳು ಮಟ್ಟಕ್ಕೆ ಇಳಿದಿದ್ದಾರೆಂದರೆ ಗವಿಸಿದ್ದಪ್ಪ ನಾಯಕರ ಕುಟುಂಬಕ್ಕೆ ನ್ಯಾಯ ಕೊಡುವ ಬದಲಾಗಿ ಗವಿಸಿದ್ದಪ್ಪ ನಾಯಕರ ತಂದೆ, ತಾಯಿ, ಅಕ್ಕ, ತಂಗಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು ದುರ್ದೈವ. ಇಂಥ ನೀಚಮಟ್ಟಕ್ಕೆ ಈ ವ್ಯವಸ್ಥೆ ಮತ್ತು ರಾಜಕಾರಣಿಗಳು ಇಳಿಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂಥ ಬರ್ಬರ ಹತ್ಯೆ. ಆದರೂ ಕೊಪ್ಪಳ ಜಿಲ್ಲೆಯ ಜನ ಇಂದು ಶಾಂತಿಯುತವಾಗಿ ಇದ್ದಾರೆ. ಬಡ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸುವ ಷಡ್ಯಂತ್ರ ವಿರುದ್ಧ ಜನ ಬೀದಿಗಿಳಿದು ಹೋರಾಡುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರವೇ ತಂದಿಡುತ್ತಿದೆ ಎಂದು ಹೇಳಿದರು.ರಾಜ್ಯ ಸರ್ಕಾರದಿಂದ ನ್ಯಾಯಕ್ಕಾಗಿ ಈ ಬಡ ಕುಟುಂಬ, ತಂದೆ, ತಾಯಿ ಕಳೆದ ವಾರ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು, 50 ಲಕ್ಷ ರು. ಪರಿಹಾರ ನೀಡಬೇಕು ಎನ್ನುವ ಅಪೇಕ್ಷೆಯನ್ನು ಅವರು ವ್ಯಕ್ತಪಡಿಸಿದ್ದರು. ನಾವು ಕೂಡ ಸರ್ಕಾರಕ್ಕೆ ಆಗ್ರಹಿಸಿದ್ದೆವು. ಆದರೆ, ಇದೀಗ ಪರಿಶಿಷ್ಟ ಪಂಗಡಕ್ಕೆ ಸೇರಿದ ಆ ಬಡ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದೆ. ಇಂಥ ದುರ್ಬುದ್ಧಿ ಇವರಿಗೆ ಬರುತ್ತದೆ ಎಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಹರಿಹಾಯ್ದರು.