ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಕಂಗ್ರಾಳಿ ಕೆ.ಎಚ್‌ ಗ್ರಾಮದ ರಾಮನಗರ ನಿವಾಸಿ ನಾಗೇಶ ಕರೆಪ್ಪ ಲಮಾಣಿ (31) ಶಿಕ್ಷೆಗೆ ಗುರಿಯಾದ ಆರೋಪಿ. 8-6-2020 ರಂದು ಆರೋಪಿಯು ನೊಂದ ಬಾಲಕಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದ್ದರೂ ಆಕೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ, ನಿರಂತರಾವಗಿ ಲೈಂಗಿಕ ಅಚ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಬಾಲಕಿಗೂ ಹಾಗೂ ಆಕೆಯ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದ. ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿ, ಒಂದು ಮಗುವಿಗೆ ಜನ್ಮ ನೀಡಲು ಕಾರಣನಾಗಿದ್ದಾನೆ. ಈ ಸಂಬಂಧ ನೊಂದ ಬಾಲಕಿಯ ತಾಯಿ ಬೆಳಗಾವಿ ನಗರ ಎ.ಪಿ.ಎಂ.ಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯ ವೇಳೆ ಒಟ್ಟು 7 ಸಾಕ್ಷಿಗಳ ಹೇಳಿಕೆಗಳು, 37 ದಾಖಲೆಗಳು ಮತ್ತು ಲಭ್ಯವಿದ್ದ ಇತರೆ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು ಆರೋಪಗಳು ಸಂಪೂರ್ಣವಾಗಿ ಸಾಬೀತಾಗಿವೆ ಎಂದು ತೀರ್ಮಾನಿಸಿ, ಪೋಕ್ಸೋ ಕಾಯ್ದೆಯ ಕಲಂ 6ರ ಅಡಿಯಲ್ಲಿ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ₹7 ಲಕ್ಷ ಪರಿಹಾರ ಧನ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ನೊಂದ ಬಾಲಕಿ ವಯಸ್ಸು ಪೂರ್ಣಗೊಳ್ಳುವವರೆಗೆ, ಈ ಪರಿಹಾರ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ಮುದ್ದತ ಠೇವಣಿಯಾಗಿ ಇಡಲು ಸಹ ನ್ಯಾಯಾಲಯ ನಿರ್ದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದರು.