ಸಾರಾಂಶ
ಬ್ಯಾಡಗಿ: ತಾಂತ್ರಿಕತೆ ವೃದ್ಧಿಸಿಕೊಳ್ಳುವ ಮೂಲಕ ನಿತ್ಯವೂ ಜನರ ಸಂಪರ್ಕದಲ್ಲಿರುವ ಸಿಬ್ಬಂದಿಗೆ ವೇಗದ ಸೇವೆ ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿರುವ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಿಸಿ ಅವರು ಮಾತನಾಡಿದರು. ತಾಂತ್ರಿಕತೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಾಗಿದೆ. ಇದರಿಂದ ಕುಳಿತಲ್ಲೇ ಹಿರಿಯ ಅಧಿಕಾರಿಗಳಿಗೆ ಪ್ರತಿಕ್ಷಣದ ಮಾಹಿತಿ ರವಾನೆಯಾಗಲಿದೆ ಎಂದರು.ಸ್ಮಾರ್ಟ್‌ಫೋನ್ ವಿತರಣೆಯಿಂದ ಅಂಗನವಾಡಿಯಲ್ಲಿರುವ ಪ್ರತಿಯೊಂದು ಮಗುವಿನ ವೈಯಕ್ತಿಕ ದಾಖಲಾತಿ, ಹಾಜರಾತಿ ದೇಹದ ತೂಕ, ನೀಡುತ್ತಿರುವ ಉಪಾಹಾರ ಸೇರಿದಂತೆ ನಿತ್ಯ ಚಟುವಟಿಕೆ ಮಾಡಲಾಗುತ್ತದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳ ಬಳಕೆ ಕಡ್ಡಾಯಗೊಳಿಸಿದ್ದಾಗಿ ತಿಳಿಸಿದರು.
ನೀವಿಲ್ಲದೇ ನಾವಿಲ್ಲ: ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಲ್ಲದೇ ಸರ್ಕಾರದ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸರ್ಕಾರದ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ಅದರ ಸಮರ್ಪಕ ಅನುಷ್ಠಾನ ಮಾಡಲು ಮತ್ತು ಯೋಜನೆಗಳನ್ನು ಪ್ರತಿ ಮನೆ ಮನೆಗೂ ತೆರಳಿ ಮುಟ್ಟಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಯಾವತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪರವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಬದುಕಿಗೆ ಆಸರೆಯಾಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಮಹಿಳೆಯರನ್ನು ಸಬಲರನ್ನಾಗಿಸುವುದು ಸರ್ಕಾರದ ಧ್ಯೇಯವಾಗಿದೆ ಎಂದರು.ಅಕ್ಷರ ದಾಸೋಹಾಧಿಕಾರಿ ಎನ್. ತಿಮ್ಮಾರೆಡ್ಡಿ, ಸಿಡಿಪಿಒ ವೈ.ಟಿ. ಪೂಜಾರ, ಮುಖಂಡರಾದ ರಮೇಶ ಸುತ್ತಕೋಟಿ, ಮುನಾಫ್ ಎರೇಶೀಮಿ, ದಾನಪ್ಪ ಚೂರಿ, ಬೀರಪ್ಪ ಬಣಕಾರ, ನಾಗರಾಜ ಆನ್ವೇರಿ, ಮಂಜುನಾಥ ಬೋವಿ, ಖಾದರಸಾಬ್ ದೊಡ್ಮನಿ, ಲಕ್ಷ್ಮೀ ಜಿಂಗಾಡೆ, ಮನ್ಸೂರ್ ಹಕೀಮ್ ಉಪಸ್ಥಿತರಿದ್ದರು.