ಸಾರಾಂಶ
ಶಿರಹಟ್ಟಿ: ಮಕ್ಕಳಿಗೆ ಕುಡಿಯಲು ನೀರಿಲ್ಲ, ಅಡುಗೆ ಮಾಡಲು ನೀರಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರದೇ ದಿಢೀರ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಪ್ರತಿಭಟನೆ ನಡೆಸಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಡಿಡಿಪಿಐ ಎಂ.ಎ. ರಡ್ಡೇರ ಹೇಳಿದರು.
ಸೋಮವಾರ ಮೇಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಎಸ್‌ಡಿಎಂಸಿ ಹಾಗೂ ಶಿಕ್ಷಕರ ಸಭೆ ನಡೆಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಬಳಸಿಕೊಂಡಿರುವುದು ನಿಯಮ ಬಾಹಿರ. ಜು. ೨೮ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್ ಹಾಗೂ ಶಿರಹಟ್ಟಿ ಸಿಆರ್‌ಪಿ ಅವರು ಶಾಲೆಗೆ ಭೇಟಿ ನೀಡಿ ಸಂದರ್ಶನ ನೀಡಿದ ಸಂದರ್ಭದಲ್ಲಿ ಶಾಲೆಯ ಯಾವುದೇ ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದಾಗ ಏನೂ ಸಮಸ್ಯೆ ಇಲ್ಲ ಎಂದು ಶಾಲಾ ಮುಖ್ಯೋಪಾಧ್ಯಾಯರು ಹೇಳಿಕೆ ನೀಡಿದ್ದಾರೆ.ಈ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಲಕ್ಷ್ಯ ತೋರಿಲ್ಲವೆಂದು ಕಂಡುಬರುತ್ತಿದೆ. ಪ್ರತಿಭಟನೆಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದು, ಇಲಾಖೆಗೆ ಮುಜುಗರ ಉಂಟುಮಾಡಿದೆ ಎಂದು ಹೇಳಿದರು. ಶಾಲೆಯ ಯಾವುದೇ ಸಮಸ್ಯೆ ಇದ್ದರೂ ಮೊದಲು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು. ಈಗಾಗಲೇ ಮುಖೋಪಾಧ್ಯಾಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಲಿಖಿತ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
ಜೂ. ೬ರಂದು ಎಸ್‌ಡಿಎಂಸಿ ಹಾಗೂ ವಾರ್ಡಿನ ಪಪಂ ಸದಸ್ಯರ ಒತ್ತಡದಿಂದ ಪ್ರತಿಭಟನೆಯಲ್ಲಿ ಮಕ್ಕಳು ಪಾಲ್ಗೊಂಡಿರುವುದು ಚರ್ಚೆ ವೇಳೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಶಿಕ್ಷಣ ಇಲಾಖೆಯ ಲೋಪದೋಷ, ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲ ಎಂದು ಲಿಖಿತ ಪತ್ರವೊಂದನ್ನು ಎಸ್‌ಡಿಎಂಸಿ ಹಾಗೂ ವಾರ್ಡಿನ ಪಪಂ ಸದಸ್ಯ ಅಧಿಕಾರಿಗಳಿಗೆ ಬರೆದುಕೊಟ್ಟಿದ್ದು, ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ತಪ್ಪಿಲ್ಲ, ನಮಗೂ ತಿಳಿಯದೇ ಈ ಘಟನೆ ನಡೆದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್, ಎಂ.ಎಚ್. ಕಂಬಳಿ, ಡಿವೈಪಿಸಿ ಗದಗ, ಶಾಲೆಯ ಮುಖ್ಯೋಪಾಧ್ಯಾಯ ಎಚ್.ವೈ. ಹೊಸಮನಿ, ಎಸ್‌ಡಿಎಂಸಿ ಉಪಾಧ್ಯಕ್ಷ ಯಲ್ಲಪ್ಪ ಮಾಗಡಿ, ನೂರ್‌ಅಹಮದ್ ಕಾರಬೂದಿ, ಫಕ್ಕಿರೇಶ ರಟ್ಟಿಹಳ್ಳಿ, ಶಿವಯೋಗಿ ತುಳಿ, ನೌಕರರ ಸಂಘದ ಅಧ್ಯಕ್ಷ ಶರಣಬಸನಗೌಡ ಪಾಟೀಲ, ಎಸ್.ಎಫ್. ಮಠದ, ಜಿ.ಎ. ಬೇವಿನಗಿಡದ, ಬಿ.ಬಿ. ಕಳಸಾಪುರ, ಎಂ.ಕೆ. ಲಮಾಣಿ, ಬಿ.ಎಸ್. ಹರ್ಲಾಪುರ, ಆರ್.ಎಂ. ಎಣಿಗಾರ, ಚಂದ್ರು ನೇಕಾರ, ಹರೀಶ್ ಎಸ್., ಉಮೇಶ್ ಎಚ್., ಎನ್.ಎನ್. ಸಾವಿರಕುರಿ, ಸಿಆರ್‌ಪಿ ಶಿರಹಟ್ಟಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಹಾಜರಿದ್ದರು.