ಜಲ ಗಂಡಾಂತರದಿಂದ ಪಾರು ಮಾಡಲು ಕ್ಷಿಪ್ರ ಕಾರ್ಯಪಡೆ

| Published : Aug 17 2025, 02:29 AM IST

ಸಾರಾಂಶ

ಜಲಾಶಯಕ್ಕೆ ಒಮ್ಮೇಲೆ 2 ಲಕ್ಷ 90 ಸಾವಿರ ಕ್ಯುಸೆಕ್‌ ನೀರು ಹರಿದು ಬಂದರೆ ಜಲಾಶಯಕ್ಕೆ ಭಾರೀ ಗಂಡಾಂತರ

ಕೃಷ್ಣ ಲಮಾಣಿ ಹೊಸಪೇಟೆ

ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಪೈಕಿ ಏಳು ಗೇಟ್‌ಗಳು ಬಾಗಿರುವ (ಬೆಂಡ್‌ ಆಗಿರುವ) ಹಿನ್ನೆಲೆ ಸಂಭಾವ್ಯ ಅಪಾಯದಿಂದ ಪಾರಾಗಲು ತುಂಗಭದ್ರಾ ಮಂಡಳಿ ಕ್ಷಿಪ್ರ ಕಾರ್ಯಪಡೆ ತಂಡ ರಚಿಸಿದೆ.

ಜಲಾಶಯಕ್ಕೆ ಒಮ್ಮೇಲೆ 2 ಲಕ್ಷ 90 ಸಾವಿರ ಕ್ಯುಸೆಕ್‌ ನೀರು ಹರಿದು ಬಂದರೆ ಜಲಾಶಯಕ್ಕೆ ಭಾರೀ ಗಂಡಾಂತರ ಒದಗಲಿದೆ. ಹಾಗಾಗಿ ಈಗ ಕ್ಷಿಪ್ರ ಕಾರ್ಯಪಡೆ ತಂಡ ರಚನೆ ಮಾಡಲಾಗಿದ್ದು, ಈ ತಂಡ ತುರ್ತು ಪರಿಸ್ಥಿತಿಯಲ್ಲಿ ಯೋಧರಂತೆ ಕಾರ್ಯ ನಿರ್ವಹಿಸಲಿದೆ.

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ಗಳ ಸ್ಥಿತಿಗತಿ ಕುರಿತು ಡ್ಯಾಂ ಸೇಫ್ಟಿ ಪರಿಶೀಲನಾ ಕಮಿಟಿ ನೀಡಿರುವ ವರದಿಯಲ್ಲಿ ಕ್ರಸ್ಟ್ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್​ಗಳು ಬೆಂಡ್ ಆಗಿವೆ. ಇದರಲ್ಲಿ 6 ಗೇಟ್​ಗಳನ್ನು ಮೇಲೆ ಎತ್ತಲು ಹಾಗೂ ಇಳಿಸಲು ಆಗುತ್ತಿಲ್ಲ. ಗೇಟ್ ನಂಬರ್ 4 ಅನ್ನು ಕೇವಲ ಎರಡು ಅಡಿ ಮಾತ್ರ ಮೇಲಕ್ಕೆ ಎತ್ತಬಹುದು. ಗೇಟ್ ನಂಬರ್ 4 ಸೇರಿದಂತೆ ಒಟ್ಟು ಏಳು ಗೇಟ್​ಗಳು ಡ್ಯಾಮೇಜ್ ಆಗಿವೆ.‌ ಹಾಗಾಗಿ ಒಮ್ಮೇಲೆ ಭಾರೀ ಪ್ರಮಾಣದಲ್ಲಿ ಪ್ರವಾಹ ಉಂಟಾದರೆ ಡ್ಯಾಂಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮನಗಂಡಿರುವ ತುಂಗಭದ್ರಾ ಮಂಡಳಿ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿದೆ.

ಹೇಗೆ ಕಾರ್ಯ ನಿರ್ವಹಣೆ?:

ತುಂಗಭದ್ರಾ ಮಂಡಳಿ ರಚಿಸಿರುವ ಕ್ಷಿಪ್ರ ಕಾರ್ಯಪಡೆ ತಂಡವು ಪ್ರವಾಹ ಉಂಟಾದರೆ 24/7 ಸಮರೋಪಾದಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. ಈ ತಂಡದಲ್ಲಿ ಪರಿಣತ ಎಂಜಿನಿಯರ್‌ಗಳು, ತಜ್ಞರು ಇರಲಿದ್ದಾರೆ. ತುಂಗಭದ್ರಾ ಮಂಡಳಿ ಛೇರಮನ್‌, ಕಾರ್ಯದರ್ಶಿ ಮತ್ತು ಅಧೀಕ್ಷಕ ಎಂಜನಿಯರ್‌ಗಳು ಮತ್ತು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ನೀರಾವರಿ ಇಲಾಖೆಗಳ ಉನ್ನತ ಅಧಿಕಾರಿಗಳ ಸಲಹೆಯೊಂದಿಗೆ ಈ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ. ಜತೆಗೆ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಪರಿಣಿತ ಎಂಜನಿಯರ್‌ಗಳ ಜತೆಗೆ ನಿರಂತರ ಸಂಪರ್ಕದಲ್ಲಿ ಇರಲಿದೆ. ಕೇಂದ್ರ ಸರ್ಕಾರ ಮತ್ತು ತ್ರಿವಳಿ ರಾಜ್ಯಗಳ ಉನ್ನತ ಅಧಿಕಾರಿಗಳ ಸಲಹೆಯೊಂದಿಗೆ ಈ ಕ್ಷಿಪ್ರ ಕಾರ್ಯಪಡೆ ಕಾರ್ಯಾಚರಣೆ ನಡೆಸಲಿದೆ ಎಂದು ತುಂಗಭದ್ರಾ ಮಂಡಳಿಯ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ದೃಢಪಡಿಸಿವೆ.

ಫ್ರೇಮ್‌ ವರ್ಕ್‌ ಸಿದ್ಧ: ತುಂಗಭದ್ರಾ ಜಲಾಶಯದಲ್ಲಿ ಒಮ್ಮೆಲ್ಲೇ 1 ಲಕ್ಷ 50 ಸಾವಿರ ಕ್ಯುಸೆಕ್‌ ನೀರು ಬಂದಾಗ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಈಗಾಗಲೇ ಮಂಡಳಿಯ ಪರಿಣಿತ ಎಂಜನಿಯರ್‌ಗಳು ಕೆಲಸ ನಿರ್ವಹಿಸಿ ಈ ವರ್ಷ ಸೈ ಎನಿಸಿಕೊಂಡಿದ್ದಾರೆ. ಆದರೆ, 2 ಲಕ್ಷ ಕ್ಯುಸೆಕ್‌, 2 ಲಕ್ಷ 50 ಸಾವಿರ ಕ್ಯುಸೆಕ್‌, 2ಲಕ್ಷ 90 ಸಾವಿರ ಕ್ಯುಸೆಕ್‌ ಮತ್ತು 3 ಲಕ್ಷ ಕ್ಯುಸೆಕ್‌ ಮತ್ತು 3ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ಜಲಾಶಯಕ್ಕೆ ಒಮ್ಮೆಲ್ಲೇ ಹರಿದು ಬಂದರೆ ಈ ಜಲ ಪ್ರಳಯ ಹೇಗೆ ತಡೆಗಟ್ಟಬೇಕು ಎಂಬುದರ ಕುರಿತು ಕ್ಷಿಪ್ರ ಕಾರ್ಯಪಡೆಗೆ ಕೇಂದ್ರದ ಪರಿಣಿತರ ತಂಡವೇ ಮಾರ್ಗದರ್ಶನ ನೀಡಲು ಫ್ರೇಮ್‌ ವರ್ಕ್‌ ಸಿದ್ಧಪಡಿಸಿದೆ. ಜತೆಗೆ ಮೂರು ರಾಜ್ಯಗಳ ನೀರಾವರಿ ಇಲಾಖೆಗಳ ಉನ್ನತ ಅಧಿಕಾರಿಗಳು ಕೂಡ ಮಾರ್ಗದರ್ಶನ ನೀಡಲಿದ್ದಾರೆ. ಸಿಂಗಲ್‌ ವಿಂಡೋ (ಏಕ ಗವಾಕ್ಷಿ)ದಲ್ಲೇ ಎಲ್ಲ ಪರಿಣತರು ಈ ಕ್ಷಿಪ್ರ ಕಾರ್ಯಪಡೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಏತನ್ಮಧ್ಯೆ, ಪರಿಣಿತ ತಜ್ಞ ಕನ್ನಯ್ಯ ನಾಯ್ಡು, ತುಂಗಭದ್ರಾ ಮಂಡಳಿ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಹೈದರಾಬಾದ್‌ನಿಂದ ಅವರನ್ನು ವಿಶೇಷ ವಿಮಾನದಲ್ಲಿ ಜಲಾಶಯಕ್ಕೆ ಕರೆ ತರಲು ಈಗಾಗಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಆಗಸ್ಟ್‌ 10ರ ರಾತ್ರಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದಾಗ ಕನ್ನಯ್ಯ ನಾಯ್ಡು ಅವರನ್ನು ಕರೆತರಲು ಸ್ವಲ್ಪ ವ್ಯತ್ಯಯ ಆಗಿತ್ತು. ಈ ಬಾರಿ ಅವರನ್ನು ಕರೆ ತರಲು ಯಾವುದೇ ಸಮಸ್ಯೆ ಆಗದಂತೆ ಎಲ್ಲ ಕ್ರಮ ವಹಿಸಲಾಗಿದೆ. ಅಲ್ಲದೇ ಜಲಾಶಯದಲ್ಲಿರುವ ವೈಕುಂಠ ಅತಿಥಿ ಗೃಹದಲ್ಲೇ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಪರಿಶೀಲನೆ ಕೂಡ ನಡೆದಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ 10 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 3 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಆಗಿನ ಮದ್ರಾಸ್‌ ಪ್ರಾಂತ್ಯ ಹಾಗೂ ಹೈದರಾಬಾದ್‌ ನವಾಬ್‌ರ ಆಸ್ಥೆಯಿಂದ ಜನ್ಮ ತಳೆದಿರುವ ಜಲಾಶಯ ಕೃಷಿ, ಕೈಗಾರಿಕೆ ಹಾಗೂ ಜನ, ಜಾನುವಾರುಗಳ ಕುಡಿಯುವ ನೀರಿಗೆ ಆಸರೆಯಾಗಿದೆ. ಅಲ್ಲದೇ, ಈ ಭಾಗದಲ್ಲಿ ಸೋನಾ ಮಸೂರಿ, ಬಾಸುಮತಿ ಅಕ್ಕಿ ಉತ್ಪಾದನೆಗೆ ಅಕ್ಷಯ ಪಾತ್ರೆ ಆಗಿದೆ.

ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹ ಮಾಡಲಾಗುತ್ತಿದೆ.‌ ಜತೆಗೆ ಕ್ಷಿಪ್ರ ಕಾರ್ಯಪಡೆ ರಚನೆ ಮಾಡಲಾಗಿದೆ. 7 ಗೇಟ್‌ಗಳು ಮುಕ್ಕಾಗಿದ್ದರೂ ಉಳಿದ ಗೇಟ್‌ಗಳಿಂದ ನಾವು ಕಾರ್ಯಾಚರಣೆ ಮಾಡುತ್ತೇವೆ. ಒಮ್ಮೆಲ್ಲೇ 2 ಲಕ್ಷ 90 ಸಾವಿರ ಕ್ಯುಸೆಕ್‌ ನೀರು ಹರಿದು ಬಂದರೆ ಅಪಾಯ ಆಗುವ ಸಾಧ್ಯತೆ ಇದೆ. ಸ್ಥಿತಿ ನಿರ್ಮಾಣ ಆಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮ ವಹಿಸಲಾಗುತ್ತಿದೆ ಎಂದು ನಾರಾಯಣ ನಾಯ್ಕ, ಅಧೀಕ್ಷಕ ಎಂಜನಿಯರ್‌, ತುಂಗಭದ್ರಾ ಮಂಡಳಿ ತಿಳಿಸಿದ್ದಾರೆ.