ಅಪರೂಪದಲ್ಲಿ ಅಪರೂಪ ಎನ್ನಲಾದ ಏಷ್ಯನ್ ಟಾಡಿ ಬೆಕ್ಕು ಪತ್ತೆಯಾಗಿದೆ. ಕಾಡು ಬೆಕ್ಕಿನ ಆಕಾರವನ್ನು ಹೋಲುವ ಈ ಪ್ರಾಣಿಯ ಬಾಲ ಉದ್ದವಾಗಿದ್ದು, ಗಟ್ಟಿಮುಟ್ಟಾದ ದೇಹವನ್ನು ಹೊಂದಿದೆ. ಒರಟಾದ ಶಾಗ್ಗಿ ಕೂದಲಿನಿಂದ ಆವೃತವಾಗಿದೆ. ಈ ಪ್ರಾಣಿ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಸಮೀಪವಿರುವ ಸಬ್ಬನಹಳ್ಳಿಯ ಶಂಭುಲಿಂಗೇಗೌಡ ಎಂಬುವರಿಗೆ ಸೇರಿದ ತೋಟದಲ್ಲಿ ಕಂಡುಬಂದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅಪರೂಪದಲ್ಲಿ ಅಪರೂಪ ಎನ್ನಲಾದ ಏಷ್ಯನ್ ಟಾಡಿ ಬೆಕ್ಕು ಪತ್ತೆಯಾಗಿದೆ. ಕಾಡು ಬೆಕ್ಕಿನ ಆಕಾರವನ್ನು ಹೋಲುವ ಈ ಪ್ರಾಣಿಯ ಬಾಲ ಉದ್ದವಾಗಿದ್ದು, ಗಟ್ಟಿಮುಟ್ಟಾದ ದೇಹವನ್ನು ಹೊಂದಿದೆ. ಒರಟಾದ ಶಾಗ್ಗಿ ಕೂದಲಿನಿಂದ ಆವೃತವಾಗಿದೆ. ಈ ಪ್ರಾಣಿ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಸಮೀಪವಿರುವ ಸಬ್ಬನಹಳ್ಳಿಯ ಶಂಭುಲಿಂಗೇಗೌಡ ಎಂಬುವರಿಗೆ ಸೇರಿದ ತೋಟದಲ್ಲಿ ಕಂಡುಬಂದಿದೆ.ಕಳೆದ ಹಲವಾರು ದಿನಗಳಿಂದಲೂ ಈ ಏಷ್ಯನ್ ಟಾಡಿ ಬೆಕ್ಕು ತೋಟದಲ್ಲಿ ಸಂಚರಿಸುತ್ತಿದ್ದು, ಇದನ್ನು ಸ್ಥಳೀಯರು ನೋಡಿದ್ದಾರೆ. ಆದರೆ, ಇದು ಯಾವ ಪ್ರಾಣಿ ಎಂಬುದರ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಇದರ ಬಳಿಗೆ ಹೋಗಲು ಭಯಪಡುತ್ತಿದ್ದರು.
ತೋಟದ ಮಾಲೀಕ ಶಂಭುಲಿಂಗೇಗೌಡ ಅವರು ಶುಕ್ರವಾರ ಸಂಜೆ ಈ ಪ್ರಾಣಿಯ ಸಂಚಾರವನ್ನು ಗಮನಿಸಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅದರ ಛಾಯಾಚಿತ್ರವನ್ನು ಸೆರೆ ಹಿಡಿದಿದ್ದಾರೆ. ಪಶುವೈದ್ಯರೊಬ್ಬರ ಬಳಿ ಈ ಪ್ರಾಣಿಯ ಬಗ್ಗೆ ವಿವರಣೆ ಕೇಳಿದಾಗ, ಆಗ ಅದು ಏಷ್ಯನ್ ಟಾಡಿ ಕ್ಯಾಟ್ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಾಣಿಯ ಸಂತತಿ ಕಡಿಮೆಯಾಗುತ್ತಿದೆ. ಈ ಪ್ರಾಣಿ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ, ಥೈಲ್ಯಾಂಡ್, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಂಡುಬರುತ್ತದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.ಕೆಲ ವರ್ಷಗಳ ಹಿಂದೆ ಚೆನ್ನೈನ ವಂಡಲೂರಿನ ಅಣ್ಣಾ ಪ್ರಾಣಿ ಶಾಸ್ತ್ರೀಯ ಉದ್ಯಾನದಲ್ಲಿ ಏಷ್ಯನ್ ಟಾಡಿ ಬೆಕ್ಕೊಂದು ೪ ಮರಿಗಳಿಗೆ ಜನ್ಮ ನೀಡಿತ್ತು. ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿರುವ ಈ ಉದ್ಯಾನ ರಾತ್ರಿ ಪ್ರಾಣಿಗಳ ಸಂಗ್ರಹ ಭಾಗವಾಗಿದೆ. ಈ ಪ್ರಾಣಿ ರಾತ್ರಿಯ ಹೊತ್ತು ಸಂಚಾರ ಮಾಡುತ್ತದೆ. ಅಂದರೆ, ಕತ್ತಲು ಕವಿದ ವಾತಾವರಣದಲ್ಲಿ ಸಂಚರಿಸುತ್ತದೆ.
ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು ಈ ಜಾತಿಯನ್ನು ‘ಕಡಿಮೆ ಕಾಳಜಿ’ ಎಂದು ವರ್ಗೀಕರಿಸಿದೆ, ಏಕೆಂದರೆ ಇದು ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆಲವು ಪ್ರದೇಶಗಳಲ್ಲಿ ಇದನ್ನು ಹತ್ಯೆ ಮಾಡಿ ಮಾಂಸವನ್ನು ತಿನ್ನುವುದು, ಮಾರಾಟ ಮಾಡುವಂತಹ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಹಾಗಾಗಿ ಇದರ ಸಾಕಾಣಿಕೆ, ಕೊಲ್ಲುವುದನ್ನು ಸ್ಥಳೀಯ ಸರ್ಕಾರಗಳು ನಿಷೇಧಿಸಿವೆ. ಇನ್ನು ಕೆಲವು ಕಡೆಗಳಲ್ಲಿ ಸಾಮಾನ್ಯ ಬೆಕ್ಕಿನ ರೀತಿಯಲ್ಲೇ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ, ಈ ಪ್ರಾಣಿ ಕೆಂಪು ಪಟ್ಟಿ ಕಾಳಜಿ ಹೊಂದಿರುವ ಕಾರಣ ಕೊಲ್ಲುವುದನ್ನು ನಿಷೇಧಿಸಲಾಗಿದೆ.ಇನ್ನು ಇದರ ಮಾಂಸದ ಸಣ್ಣ ತುಂಡುಗಳಿಂದ ಹೊರ ತೆಗೆಯಲಾದ ಎಣ್ಣೆಯನ್ನು ಮುಚ್ಚಿದ ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿಟ್ಟು, ಬಿಸಿಲಿನಲ್ಲಿ ನಿಯಮಿತವಾಗಿ ಇಡಲಾಗುತ್ತದೆ. ಈ ಎಣ್ಣೆಯನ್ನು ತುರಿಕೆ ಚಿಕಿತ್ಸೆಗೂ ಬಳಲಾಗುತ್ತದೆ ಎಂದು ಹೇಳಲಾಗಿದೆ. ಕೇರಳದಲ್ಲಿ ಈ ಪ್ರಾಣಿಗಳು ಸ್ವಲ್ಪ ಮಟ್ಟಿಗೆ ಹೆಚ್ಚಾಗಿ ಕಂಡುಬರುತ್ತವೆ. ರಾತ್ರಿಯ ವೇಳೆ ಹೆಂಚಿನ ಛಾವಣಿ ಮೇಲೆ ಓಡಾಡುತ್ತವೆ. ಅದನ್ನು ಹಿಡಿಯಲು ಬಂದರೆ ಕೆಟ್ಟ ವಾಕರಿಕೆ ಬರುವಂತಹ ವಾಸನೆಯನ್ನು ಹೊರ ಹಾಕುತ್ತದೆ. ಇದರಿಂದ ಅಲ್ಲಿಗೆ ಯಾರೂ ಸುಳಿಯುವುದಿಲ್ಲ ಎಂದೂ ಹೇಳಲಾಗಿದೆ.
ನಮ್ಮ ತೋಟದಲ್ಲಿ ಇದು ಯಾವ ಕಡೆಯಿಂದ ಬಂದಿದೆ ಎಂಬುದು ತಿಳಿದಿಲ್ಲ. ಇದಕ್ಕೆ ಗಾಯವಾಗಿರುವ ಲಕ್ಷಣಗಳು ಕಂಡುಬಂದಿದ್ದು, ಇದನ್ನು ಸಮೀಪದಲ್ಲಿ ಹೋಗಿ ನೋಡಲು ನಮಗೆ ಭಯವಾಗಿರುವ ಕಾರಣ ನಾವು ಹತ್ತಿರ ಹೋಗಿ ನೋಡಲಾಗಿಲ್ಲ. ದೂರದಲ್ಲೇ ನಿಂತು ಫೋಟೋ ತೆಗೆದಿದ್ದೇವೆ. ಇಂತಹ ಅಪರೂಪದ ಪ್ರಾಣಿಗಳನ್ನು ರಕ್ಷಿಸುವ ಅಗತ್ಯವಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಸಂರಕ್ಷಣೆ ಮಾಡಲು ಒತ್ತಾಯಿಸಲಾಗುತ್ತದೆ ಎಂದು ಶಂಭುಲಿಂಗೇಗೌಡ ತಿಳಿಸಿದ್ದಾರೆ.ಸಾಮಾನ್ಯವಾಗಿ ಏಷ್ಯನ್ ಪಾಮ್ ಸಿವೆಟ್ ಎಂದು ಕರೆಯಲಾಗುವ ಈ ಪ್ರಾಣಿ ರೈತನ ಸ್ನೇಹಿತನ ರೀತಿಯಲ್ಲಿರುತ್ತದೆ. ಇದು ಸಣ್ಣ ಪುಟ್ಟ ಹುಳುಗಳು, ಬೀಜಗಳು, ಹಣ್ಣುಗಳನ್ನು ತಿಂದು ಬದುಕುತ್ತದೆ. ಇದು ಯಾರಿಗೂ ತೊಂದರೆ ಮಾಡುವುದಿಲ್ಲ.
- ಶಿವರಾಮು, ಅರಣ್ಯಾಧಿಕಾರಿ, ನಾಗಮಂಗಲ