ಎಸ್.ಜಿ. ತೆಗ್ಗಿನಮನಿ
ನರಗುಂದ: ಪಟ್ಟಣದ ಅಜ್ಜಪ್ಪಗೌಡ ಪಾಟೀಲ ಎಂಬವರ ಕುರ್ಲಗೇರಿ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಔಷಧಿ ಗುಣ ಹೊಂದಿರುವ ಅಪರೂಪದ ಮಡ್ಡಿ ಮರ ಪತ್ತೆಯಾಗಿದೆ.ಇದು ಮೊರಿಂಡಾ ಕೊರಿಯಾ ರುಬಿಯೇಶಿ ಕುಟುಂಬಕ್ಕೆ ಸೇರಿದೆ. ಈ ಮರವು ಸುಮಾರು 101 ವರ್ಷ ಹಳೆಯದಾಗಿದ್ದು, ಇದರ ಕಾಂಡ 6 ಅಡಿ ಅಗಲ ಮತ್ತು ಸುಮಾರು 45 ಅಡಿ ಎತ್ತರವಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮಡ್ಡಿ, ಹಳದಿಪಾವಟೆ, ತಗಸಿ ಎಂಬ ಹೆಸರಿಂದ ಕರೆಯಲಾಗುತ್ತದೆ.
ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಸಣ್ಣ ಅಥವಾ ಮಧ್ಯಮ ಗಾತ್ರದ ಮರವಾಗಿದೆ. ಇದನ್ನು ಇಂಗ್ಲಿಷಿನಲ್ಲಿ ಇಂಡಿಯನ್ ಮಲ್ಬೆರಿ ಅಥವಾ ನೋನಿ ಎಂದು ಕರೆಯುತ್ತಾರೆ. ಇದು ಕರ್ನಾಟಕದ ಒಣ ಮತ್ತು ಅರೆ- ಒಣ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಈ ಸಸ್ಯದ ಪ್ರತಿಯೊಂದು ಭಾಗವೂ (ಬೇರು, ತೊಗಟೆ, ಎಲೆಗಳು ಮತ್ತು ಹಣ್ಣು) ಅತ್ಯಂತ ಮೌಲ್ಯಯುತವಾಗಿದೆ. ಉರಿಯೂತ ನಿವಾರಕ, ಕೀಲು ನೋವು ಮತ್ತು ಸಂಧಿವಾತದ ಚಿಕಿತ್ಸೆಗೆ ಇದರ ಎಲೆಗಳು ಮತ್ತು ಬೇರುಗಳನ್ನು ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಗಾಯಗಳು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರಿಸುತ್ತದೆ. ಹಣ್ಣುಗಳಲ್ಲಿ ವಿಟಮಿನ್ ಸಿ ಹೊಂದಿದೆ. ಮರದ ಬೇರುಗಳು ಮೊರಿಂಡೋನ್ ಎಂಬ ನೈಸರ್ಗಿಕ ವರ್ಣದ್ರವ್ಯವನ್ನು ನೀಡುತ್ತವೆ. ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಹಳದಿ, ಕೆಂಪು ಮತ್ತು ಕಂದು ಬಣ್ಣಗಳನ್ನು ನೀಡಲು ಇದರ ಬೇರಿನ ತೊಗಟೆಯನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಈಗಲೂ ಖಾದಿ ಬಟ್ಟೆಗಳಿಗೆ ಇದರಿಂದ ತಯಾರಿಸಿದ ಬಣ್ಣವನ್ನು ಬಳಸಲಾಗುತ್ತದೆ.
ಎತ್ತರದ ಮರ: ಈ ಮರವು ಸುಮಾರು 5ರಿಂದ 35 ಅಡಿ ಎತ್ತರಕ್ಕೆ ಬೆಳೆಯುವ ಸದಾ ಹಸಿರಿನ ಸಣ್ಣ ಮರ ಅಥವಾ ಪೊದೆ ಗಿಡವಾಗಿದೆ. ಚಿಕ್ಕದಾದ, ಸುಕ್ಕುಗಟ್ಟಿದ ಮತ್ತು ಒರಟಾದ ಕಾಂಡವನ್ನು ಹೊಂದಿದೆ. ಪತ್ತೆಯಾಗಿರುವ ಈ ಮರದ ಎತ್ತರ 45 ಅಡಿ ಇದೆ. ಎಲೆಗಳು ಗಾಢ ಹಸಿರು ಬಣ್ಣದಲ್ಲಿದ್ದು, ಉದ್ದವಾಗಿವೆ. ಹೂವುಗಳು ಗುಂಡಗಿನ ಆಕಾರದಲ್ಲಿ ಬಿಳಿ ಬಣ್ಣದಲ್ಲಿ ಮತ್ತು ಸುವಾಸನೆಯಿಂದ ಕೂಡಿವೆ. ಮರದ ಹಣ್ಣುಗಳು ಪೋಷಕಾಂಶದಿಂದ ಕೂಡಿವೆ. ಹಣ್ಣುಗಳು ನೈಸರ್ಗಿಕ ಆಸ್ಕೋರ್ಬಿಕ್ ಆಮ್ಲ (ವಿಟಮಿನ್ ಸಿ) ಮತ್ತು ಇತರ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ.
ಸ್ಥಳೀಯವಾಗಿ ಈ ಮರಕ್ಕೆ ಬಣ್ಣದ ಮಾರಿ ಮರವೆಂದು ಕರೆಯುತ್ತಾರೆಂದು ರೈತ ರಾಚನಗೌಡ ಪಾಟೀಲ ಮತ್ತು ಪರಿಸರ ಸಂರಕ್ಷರಾದ ದೇವರಾಜ ಮಲ್ಲಸರ್ಜ ದೇಸಾಯಿ ಅವರು ತಿಳಿಸಿದರು.ಈ ಮರವು ಭಾರತೀಯ ಮೂಲದ ಮರವಾಗಿದ್ದು, ಸಾಂಪ್ರದಾಯಿಕ ವೈದ್ಯಕೀಯದಲ್ಲಿ ಹಾಗೂ ಪ್ರಸ್ತುತ ಕಾಲದಲ್ಲಿಯೂ ಬಳಸಲಾಗುತ್ತಿದೆ. ಇಂತಹ ಅಪರೂಪದ ಸ್ಥಳೀಯ ಜಾತಿಯ ಮರಗಳನ್ನು ಸಂರಕ್ಷಿಸಬೇಕು. ಇದರ ಹೂವು, ಕಾಯಿ ಮತ್ತು ಹಣ್ಣುಗಳು ಹಲವಾರು ಕೀಟ ಹಾಗೂ ಪಕ್ಷಿಗಳಿಗೆ ಆಹಾರ ಮತ್ತು ಸೂರನ್ನು ಒದಗಿಸುತ್ತವೆ ಎಂದು ಪರಿಸರ ಸಂರಕ್ಷಕ ಮಲ್ಲಸರ್ಜ ದೇಸಾಯಿ ಹೇಳಿದರು.
ಜೀವವೈವಿಧ್ಯ ಸಮತೋಲನ: ಮರದ ಹೂವುಗಳು, ಕಾಯಿ ಮತ್ತು ಹಣ್ಣುಗಳು ಹಲವಾರು ಕೀಟ ಹಾಗೂ ಪಕ್ಷಿಗಳಿಗೆ ಆಹಾರ ಮತ್ತು ಸೂರನ್ನು ಒದಗಿಸುತ್ತದೆ. ವಯಸ್ಸಾದ ಮರದ ಪೂಟರೆಗಳಲ್ಲಿ ಹಾಲಕ್ಕಿ, ಮರಕುಟುಕ ಮತ್ತು ಮಂಗಟ್ಟೆಯಂತಹ ಪಕ್ಷಿಗಳು ಗೂಡು ಕಟ್ಟುತ್ತವೆ. ಜೀವವೈವಿಧ್ಯ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದರು.