ಮಿಮ್ಸ್ ಆಸ್ಪತ್ರೆ ಆಡಳಿತ ಸುಧಾರಣೆಗೆ ರಾಷ್ಟ್ರ ಸಮಿತಿ ಪಕ್ಷ ಜ.೧೫ರ ಗಡುವು...!

| Published : Jan 02 2024, 02:15 AM IST

ಮಿಮ್ಸ್ ಆಸ್ಪತ್ರೆ ಆಡಳಿತ ಸುಧಾರಣೆಗೆ ರಾಷ್ಟ್ರ ಸಮಿತಿ ಪಕ್ಷ ಜ.೧೫ರ ಗಡುವು...!
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಮಿಮ್ಸ್ ವೈದ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದ್ದು, ಈ ಅವ್ಯವಸ್ಥೆ ವಿರುದ್ಧ ನಮ್ಮ ಹೋರಾಟ. ರಾಷ್ಟ್ರ ಸಮಿತಿ ಪಕ್ಷ ಜ.೧೫ರ ವರೆಗೆ ಗಡುವು ನೀಡಿದ್ದು, ಸುಧಾರಣೆ ಕಂಡುಬರದಿದ್ದ ಪಕ್ಷದಲ್ಲಿ ಜ.೧೫ರ ಬಳಿಕ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯಅವ್ಯವಸ್ಥೆಯಿಂದ ಕೂಡಿರುವ ಮಿಮ್ಸ್ ಆಸ್ಪತ್ರೆ ಆಡಳಿತ ಸುಧಾರಣೆಗೆ ರಾಷ್ಟ್ರ ಸಮಿತಿ ಪಕ್ಷ ಜ.೧೫ರ ವರೆಗೆ ಗಡುವು ನೀಡಿದ್ದು, ಸುಧಾರಣೆ ಕಂಡುಬರದಿದ್ದ ಪಕ್ಷದಲ್ಲಿ ಜ.೧೫ರ ಬಳಿಕ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ರಾಷ್ಟ್ರ ಸಮಿತಿ ಪಕ್ಷ ಹಾಗೂ ಕರುನಾಡ ಸೇವಕರು ಸಂಘಟನೆ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅನೌಪಚಾರಿಕ ಸಭೆ ನಡೆಸಿ ಆಸ್ಪತ್ರೆಯೊಳಗಿರುವ ಅವ್ಯವಸ್ಥೆ, ವೈದ್ಯರ ಕರ್ತವ್ಯಲೋಪ, ಸಾರ್ವಜನಿಕರಿಗೆ ಸಮರ್ಪಕವಾಗಿ ಚಿಕಿತ್ಸೆ ಸಿಗದಿರುವುದೂ ಸೇರಿದಂತೆ ಹಲವು ಅಕ್ರಮಗಳ ಕುರಿತು ತಮ್ಮ ಗಮನ ಸೆಳೆಯಲಾಗಿತ್ತು. ಆದರೂ ಆಸ್ಪತ್ರೆಯ ಆಡಳಿತದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರುವುದಿಲ್ಲ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿರುವುದಿಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಮಿಮ್ಸ್ ವೈದ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದ್ದು, ಈ ಅವ್ಯವಸ್ಥೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರಾಷ್ಟ ಸಮಿತಿ ಪಕ್ಷದ ಅರುಣ್‌ಕುಮಾರ್ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ವಕೀಲ ಬಿ.ಟಿ.ವಿಶ್ವನಾಥ್. ಜೆ.ರಾಮಯ್ಯ ಮತ್ತಿತರರು ಎಚ್ಚರಿಸಿದ್ದಾರೆ.

ಆಗ್ರಹಗಳೇನು?

೧. ಅಪಘಾತ ಹಾಗೂ ತುರ್ತುಚಿಕಿತ್ಸಾ ಘಟಕ ಸೇರಿದಂತೆ ಎಲ್ಲ ವಿಭಾಗದಲ್ಲೂ ಕರ್ತವ್ಯ ನಿರತ ವೈದ್ಯರು ಸದಾ ಹಾಜರಿರಬೇಕು.

೨. ಸ್ತ್ರೀ ಮತ್ತು ಹೆರಿಗೆ ವಿಭಾಗದಲ್ಲಿ ಸುಸಜ್ಜಿತ ಮಕ್ಕಳ ತೀವ್ರ ಘಟಕ ಸ್ಥಾಪಿಸಬೇಕು. ಕರ್ತವ್ಯ ನಿರತ ಹಿರಿಯ ವೈದ್ಯರು ಹಾಜರಿರಬೇಕು.

೩. ಹೊರರೋಗಿ ವಿಭಾಗದಲ್ಲಿ ಕಾರ್ಪೋರೇಟ್ ಮಾದರಿಯಲ್ಲಿ ಸುಗಮ ನಿರ್ವಹಣೆ ನಡೆಸಬೇಕು. ಒಳರೋಗಿ ವಿಭಾಗದಲ್ಲಿ ದಿನಕ್ಕೆ ಎರಡು ಬಾರಿ ವೈದ್ಯರು ತಪಾಸಣೆ ನಡೆಸಬೇಕು.

೪. ವೆಂಟಿಲೇಟರ್ ಇದ್ದರೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸಾಗಹಾಕಲಾಗುತ್ತಿದೆ. ಎಲ್ಲದಕ್ಕೂ ಆಸ್ಪತ್ರೆ ಹೊರಗಿನ ಔಷಧ ಅಂಗಡಿಗಳು ಹಾಗೂ ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಅಟ್ಟುವ ಪ್ರವೃತ್ತಿ ನಿಲ್ಲಬೇಕು. ಪ್ರತಿ ವಿಭಾಗದಲ್ಲೂ ಹೆಲ್ಪ್‌ಡೆಸ್ಕ್ಸ್ಥಾ ಪಿಸಬೇಕು. ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧ ಮಳಿಗೆಯಲ್ಲಿ ಎಲ್ಲ ಔಷಧಗಳು ಸಿಗುವಂತೆ ಮಾಡಬೇಕು.ಖಾಸಗಿ ಮೆಡಿಕಲ್ ಗಳೊಂದಿಗಿನ ಅಕ್ರಮ ಮೈತ್ರಿ ತುಂಡರಿಸಬೇಕು

೫. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಮಾಕೇರ್ ಸೆಂಟರ್ ನಿರ್ಮಾಣ ಹಾಗೂ ಜಯದೇವ ಮಾದರಿಯ ಹೃದ್ರೋಗ ಘಟಕ ಸ್ಥಾಪನೆಗೆ ಕ್ರಮ ವಹಿಸಬೇಕು. ಈ ಸಂಬಂದ ಈಗಾಗಲೇ ಬಿಡುಗಡೆಯಾಗಿರುವ ಹಣ ಬಳಕೆಗೆ ಅನುವಾಗುವಂತೆ ತಮಿಳು ಕಾಲೋನಿ ಪ್ರದೇಶವನ್ನು ಹೈಕೋರ್ಟ್ ಆದೇಶದಂತೆ ಆಸ್ಪತ್ರೆಯ ಜಾಗವನ್ನು ವಶಕ್ಕೆ ಪಡೆಯಬೇಕು.

೬. ಕ್ಯಾನ್ಸರ್ ಘಟಕ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಎಬಿಆರ್‌ಕೆ ಅಡಿಯಲ್ಲಿ ಸರ್ಕಾರಿ ಹಣ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಪೂರ್ಣಪ್ರಮಾಣದ ರೇಡಿಯೋ ಥೆರಪಿಸ್ಟ್ ನೇಮಕವಾಗಬೇಕು.

೭. ರೋಗ ಪತ್ತೆ ನಿರ್ವಹಣೆ ಹಾಗೂ ರೋಗಪತ್ತೆಗೆ ಬಳಸುವ ರಾಸಾಯನಿಕಗಳ ಪೂರೈಕೆ ಹಾಗೂ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿದ್ದು ಇದರಿಂದ ಆಸ್ಪತ್ರೆಗೆ ಪ್ರತೀ ವರ್ಷ ಐದು ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ರೋಗಪತ್ತೆ ಪ್ರಯೋಗಾಲಯದ ನಿರ್ವಹಣೆಯನ್ನು ನೇರವಾಗಿ ಆಸ್ಪತ್ರೆ ವತಿಯಿಂದ ನಿರ್ವಹಿಸಬೇಕು.

೮. ಬಯೋಮೆಟ್ರಿಕ್ ಹಾಜರಾತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಎಬಿಆರ್‌ಕೆ ದತ್ತಾಂಶ ಸಂಗ್ರಹ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿ, ಪ್ರತಿ ತಿಂಗಳು ಆಸ್ಪತ್ರೆಗೆ ಹೆಚ್ಚುವರಿ ಎರಡು ಲಕ್ಷ ಹೊರೆ ಬೀಳುತ್ತಿರುವುದನ್ನು ತಪ್ಪಿಸಲು ಮಿಮ್ಸ್ ವತಿಯಿಂದಲೇ ನಿರ್ವಹಿಸಬೇಕು.

೯. ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ನಡೆದಿರುವ ಸಿವಿಲ್ ಕಾಮಗಾರಿಗಳ ಅಕ್ರಮದ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಬೇಕು.

೧೦. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭದ್ರತಾ ಸೇವೆ ಒದಗಿಸಿರುವ ಕೆಎಸ್‌ಎಫ್ -೯ ಸಂಸ್ಥೆ ನಕಲಿ ದಾಖಲೆ ಒದಗಿಸಿ ಟೆಂಡರ್ ಪಡೆದಿದ್ದೂ ಈ ಸಂಬಂದ ಚೆಸ್ಕಾಂ ನೀಡಿದ್ದ ಸೇವಾ ಪ್ರಮಾಣ ಪತ್ರವನ್ನು ಹಿಂಪಡೆದಿದ್ದರೂ ಏಜೆನ್ಸಿ ವಿರುದ್ದ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು.

೧೧.ನಕಲಿ ಭೋದನಾ ಪ್ರಮಾಣಪತ್ರ ನೀಡಿದ ವೈದ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಪ್ರಯತ್ನಕ್ಕೆ ತಡೆಹಾಕಿ ನಕಲಿ ಬೋಧನಾ ಪ್ರಮಾಣಪತ್ರದ ಕುರಿತು ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಬೇಕು.