ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮನುಷ್ಯತ್ವವೇ ಚೂರಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ಚಿಂತನೆ, ಆಲೋಚನೆ ಹಾಗೂ ಸಾಹಿತ್ಯದ ಪ್ರಕಾರಗಳು ಅಗತ್ಯವಾಗಿವೆ ಎಂದು ಸಾಂಸ್ಕೃತಿಕ ಚಿಂತಕ ಶಂಕರ ದೇವನೂರು ಅಭಿಪ್ರಾಯಪಟ್ಟರು.ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಮುಕ್ತ ಗಂಗೋತ್ರಿ ಮೈಸೂರು, ವಿಜಯ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಾಡಗೀತೆ ಶತಮಾನ ಸಂಭ್ರಮಾಚರಣೆ ಪ್ರಯುಕ್ತ ನಡೆದ ಕುವೆಂಪು ಸಾಹಿತ್ಯ ಬಹುಮುಖಿ ನೆಲೆಗಳು ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರು ತನ್ನ 20ನೇ ವಯಸ್ಸಿನಲ್ಲಿಯೇ ಅಖಂಡ ಕರ್ನಾಟಕದ ಕನಸ್ಸು ಕಂಡ ಮಹಾನ್ ಚಿಂತಕರು. ಕುವೆಂಪು ಕರ್ನಾಟಕದ ಹೆಮ್ಮೆ. ಕನ್ನಡ ಸಾಹಿತ್ಯ ಲೋಕದ ಕಳಶವಾಗಿದ್ದಾರೆ. ತಮ್ಮ ಸಾಹಿತ್ಯ, ಕಾವ್ಯ, ನಾಟಕಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ್ದಾರೆ ಎಂದರು.ವಿದ್ಯಾರ್ಥಿಗಳು ಕುವೆಂಪು ಸಾಹಿತ್ಯಗಳ ಅವಲೋಕನ ಮಾಡಬೇಕು. ಅವರ ಚಿಂತನೆಗಳು ಜೀವಪರವಾದ ಚಿಂತನೆಗಳಾಗಿವೆ. ಹಾಗಾಗಿ ಪ್ರತಿಯೊಬ್ಬರೂ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬದುಕು ಬೆಳಕಾಗುವ ಜೊತೆಗೆ ಸಾರ್ಥಕತೆಯ ಬದುಕಿನೆಡೆ ನಾವೆಲ್ಲ ಸಾಗಬೇಕಿದೆ. ಭೂಮಿ ಮೇಲೆ ಜನಿಸಿದ ನಾವೆಲ್ಲರೂ ನೆಲದ ಫಲ, ಜಲವನ್ನು ಸೇವಿಸಿ ಬದುಕು ನಡೆಸಿದ್ದೇವೆ. ಹಾಗಾಗಿ ನೆಲದ ಋಣ ತೀರಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.ಮೈಸೂರು ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಕುವೆಂಪು ಅವರು ತಮ್ಮ ಇಪ್ಪನೇ ವಯಸ್ಸಿನಲ್ಲಿಯೇ ನಾಡಗೀತೆ ರಚನೆ ಮಾಡಿದರು ಎಂದರೆ ಅವರ ಜ್ಞಾನ, ವಿಚಾರಧಾರೆ ಎಷ್ಟು ಶ್ರೀಮಂತವಾಗಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಕುವೆಂಪು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಳ್ಳಬೇಕು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಗಂಗೋತ್ರಿಯ ಪ್ರೊ.ಎಂ.ರಾಮನಾಥಂ ನಾಯ್ಡು, ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಕುವೆಂಪು ಸಂಶೋಧನ ವಿಸ್ತರಣ ಕೇಂದ್ರ ಸಂಶೋಧನಾಧಿಕಾರಿ ಎನ್.ಆರ್.ಚಂದ್ರೇಗೌಡ, ಗೋಷ್ಠಿಯಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕರು ಪ್ರೊ.ಲತಾ, ಶಾರದ ವಿಲಾಸ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ.ಎನ್.ಗಿರೀಶ್, ಎಂಐಟಿ ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕ ಜಿ.ಡಿ.ಶಿವರಾಜ್ ಅಧ್ಯಕ್ಷತೆ ವಹಿಸಿದ್ದರು. ಮಹಾರಾಜ ಕಾಲೇಜು ಬಿ.ಪಿ.ಆಶಾಕುಮಾರಿ, ಶೇಷಾದ್ರಿಪುರಂ ಪದವಿ ಕಾಲೇಜು ಸಹ ಪ್ರಾಧ್ಯಾಪಕಿ ಸಿ.ಪಿ.ಲಾವಣ್ಯ, ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಎಂ.ನಂಜುಂಡಯ್ಯ, ಕನ್ನಡ ಸಹ ಪ್ರಾಧ್ಯಾಪಕಿ ಕರಾಮುವಿ ಡಾ.ಪಿ.ಮಣಿ, ವಿಜಯ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ರಾಜೇಶ್, ಡಾ.ಎಸ್.ಕೆ.ಲೀಲಾ, ವಿಜಯ ಪ್ರಥಮ ದರ್ಜೆ ಪ್ರಾಂಶುಪಾಲ ಎಂ.ಕೃಷ್ಣಮೂರ್ತಿ, ಆಡಳಿತ ಮಂಡಳಿ ಉಪಾಧ್ಯಕ್ಷೆ ಶಾಂತಮ್ಮ, ನಿರ್ದೇಶಕರಾದ ಸೋಮೇಗೌಡ, ಪಿ.ಎಸ್.ಲಿಂಗರಾಜು, ರಾಮೇಗೌಡ, ಚಂದ್ರಶೇಖರ್, ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))