ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ನ್ಯಾಯಾಲಯದಲ್ಲಿ ಜು.13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಹರಿಣಿ ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಲೋಕ್ ಅದಾಲತ್ ನಡೆಯಲಿದೆ ಎಂದರು.
ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳು ಮತ್ತು ವಿವಿಧ ಇಲಾಖೆಗಳ ಸಂಬಂಧ ಪಟ್ಟ ವ್ಯಾಜ್ಯಪೂರ್ವ ಪ್ರಕರಣಗಳ ಇತ್ಯರ್ಥಕ್ಕೆ ಜನತಾ ನ್ಯಾಯಾಲಯ ಏರ್ಪಡಿಸಲಾಗಿದೆ ಎಂದರು.ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಸಹಕಾರದೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವ ಲೋಕ್ ಅದಾಲತ್ ಅಥವಾ ಜನತಾ ನ್ಯಾಯಾಲಯದಿಂದ ಜನರು ತಮ್ಮ ಪ್ರಕಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅದಾಲತ್ ಸಹಕಾರಿಯಾಗಿದೆ ಎಂದರು.
ಲೋಕ ಅದಾಲತ್ ಮೂಲಕ ಕಕ್ಷಿದಾರರು ಯಾವುದೇ ಶುಲ್ಕವಿಲ್ಲದೆ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದೆ. ಇದರಿಂದ ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ನ್ಯಾಯಾಧೀಶರು ಅವಶ್ಯಕತೆ ಇರುವ ಪ್ರಕರಣಗಳನ್ನು ಬಗ್ಗೆ ಹೆಚ್ಚು ಒತ್ತು ನೀಡುವ ಮೂಲಕ ಶೀಘ್ರ ನ್ಯಾಯ ಧಾನಕ್ಕೆ ಸಹಕಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಲೋಕ ಅದಾಲತ್‌ನಲ್ಲಿ ರಾಜಿಯಾಗುವ ಪ್ರಕರಣಗಳ ಆದೇಶವೇ ಅಂತಿಮವಾಗಿರುತ್ತದೆ. ಪ್ರಕರಣಗಳು ಇತ್ಯರ್ಥವಾದ ನಂತರ ಮೇಲ್ಮನವಿಗೆ ಅವಕಾಶವಿಲ್ಲ. ಕಕ್ಷಿದಾರರು ಸ್ವಪ್ರೇರಣೆ ಇಂದ ಮುಂದೆ ಬಂದು ತಮ್ಮ ವಿವಾದಗಳನ್ನು ಬಗೆಹರಿಸಿಕೊಂಡಲ್ಲಿ ಸೌಹಾರ್ದಯುತ ಜೀವನ ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಜಿತ್ ದೇವರಮನಿ ಮಾತನಾಡಿ, ನ್ಯಾಯಾಲಯದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಲೋಕ ಅದಾಲತ್ ನಲ್ಲಿ 820 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸುವುದರೊಂದಿಗೆ 9 ಕೋಟಿ,76 ಲಕ್ಷ ರು.ಮೀರಿ ಹಣವನ್ನು ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಒಂದನೇ ಅಪರ ಸಿವಿಲ್ ನ್ಯಾಯಾಧೀಶ ನಳಿನ, ಎರಡನೇ ಅಪರ ನ್ಯಾಯಾಧೀಶರಾದ ಎನ್.ವಿ. ಕೊನಪ್ಪ, ಮೂರನೇ ಅಪರ ನ್ಯಾಯಾಧೀಶ ಎಸ್.ಪಿ. ಕಿರಣ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಂ ದೇವಿಡ್ ಜಿ. ಕಪನಿ ನಂಜೇಶ್ವರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ. ಇದ್ದರು.