ರಸಕವಿ ಕುವೆಂಪು ಕನ್ನಡಿಗರ ಮನದಲ್ಲಿ ಅಜರಾಮರ: ರಾಜ್ಯಾಧ್ಯಕ್ಷ ರಮೇಶ್ ಗೌಡ

| Published : Dec 30 2024, 01:03 AM IST

ರಸಕವಿ ಕುವೆಂಪು ಕನ್ನಡಿಗರ ಮನದಲ್ಲಿ ಅಜರಾಮರ: ರಾಜ್ಯಾಧ್ಯಕ್ಷ ರಮೇಶ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕುವೆಂಪು ಅವರು ರವೀಂದ್ರನಾಥ ಟ್ಯಾಗೂರರಂತೆ ರಾಷ್ಟ್ರ ಗೀತೆ ಮಾದರಿಯಲ್ಲಿ ನಾಡಗೀತೆ ಹಾಗೂ ರೈತ ಗೀತೆಯಂಥ ಸಾಕಷ್ಟು ಗೀತೆಗಳನ್ನು ನೀಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಇಂಥ ಮಹನೀಯರ ಆದರ್ಶಗಳನ್ನು ಜೀವಂತವಾಗಿರಿಸುವ ಕೆಲಸವನ್ನು ಇಂದಿನ ಯುವಪೀಳಿಗೆ ಮಾಡಬೇಕು .

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ವೈಚಾರಿಕತೆ, ಪ್ರಕೃತಿ ಪ್ರಾಮುಖ್ಯತೆ ತಿಳಿಸಿಕೊಡುವ ಜತೆಗೆ ವಿಶ್ವಮಾನವತೆಯ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು, ಕನ್ನಡಿಗರ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಹೇಳಿದರು.

ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ೧೨೦ನೇ ಜನ್ಮದಿನೋತ್ಸವದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕುವೆಂಪು ರಚಿಸಿದ ಕವಿತೆಗಳೇ ಅವರ ಜೀವನದ ಬಗ್ಗೆ ತಿಳಿಸುವ ಕೈಗನ್ನಡಿಯಾಗಿವೆ. ಅವರು ಮಲೆನಾಡಿನ ಸಾಹಿತ್ಯದ ಸಿರಿ. ಅವರು ಈ ನೆಲದ ಯಾವುದೇ ಪ್ರದೇಶವನ್ನು ಬಿಡದೇ ತಮ್ಮ ಸಾಹಿತ್ಯದಲ್ಲಿ ಅದರ ಘಮಲನ್ನು ಹರಡಿಸಿದ್ದಾರೆ ಎಂದರು.

ನಾನು ಕುವೆಂಪು ಅವರ ಕೃತಿಗಳನ್ನು ಓದಿ ಜೀವನಕ್ಕೆ ಅಲ್ಪಭಾಗ ಅಳವಡಿಸಿಕೊಂಡು, ಅವರ ಆಶಯದಂತೆ ನಾನು ಕೂಡ ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟೆ. ನಂತರ ಹತ್ತಾರು ಮಂದಿಗೆ ಮಂತ್ರ ಮಾಂಗಲ್ಯ ವಿವಾಹ ಮಾಡಿಸುವಲ್ಲೂ ಸಾಫಲ್ಯ ಕಂಡಿದ್ದೇನೆ ಎಂದರು.

ತಮ್ಮ ಸಾಹಿತ್ಯದ ಮೂಲಕ ವೈಚಾರಿಕತೆ, ನಾಡು- ನುಡಿ, ದೇಶಪ್ರೇಮ, ಭ್ರಾತೃತ್ವ, ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಜೀವನ ಪ್ರೀತಿಯನ್ನು ಅರಳಿಸುವುದಲ್ಲದೆ, ದುರುಳತೆಯನ್ನು ಸರ್ವರ ಮನಸ್ಸಿನಿಂದ ಬಡಿದೋಡಿಸುವ ಎಲ್ಲಾ ಪ್ರಯತ್ನ ಮಾಡಿದ ಶತಮಾನದ ಶ್ರೇಷ್ಠ ವ್ಯಕ್ತಿ ಕುವೆಂಪು ಎಂದು ಬಣ್ಣಿಸಿದರು.

ನಿವೃತ್ತ ಪ್ರಾಂಶುಪಾಲ ನಿಂಗೇಗೌಡ ಮಾತನಾಡಿ, ಕುವೆಂಪು ಅವರು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಲ್ಲಾ ಬಗೆಯಲ್ಲೂ ಸಾಹಿತ್ಯದ ಸವಿಯನ್ನು ಉಣಬಡಿಸಿದ್ದಾರೆ. ತಮ್ಮ ಬಗ್ಗೆ ಕುಹಕವಾಡುತ್ತಿದ್ದ ಮಂದಿಗೆ ಅವರು ತಮ್ಮ ಕೃತಿಗಳ ಮೂಲಕವೇ ಉತ್ತರ ನೀಡಿದ ಧೀಮಂತರು. ಕುವೆಂಪು ಅವರಿಗೆ ಅವರೇ ಸಾಟಿ ಎಂದು ಬಣ್ಣಿಸಿದರು.

ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕುವೆಂಪು ಅವರು ರವೀಂದ್ರನಾಥ ಟ್ಯಾಗೂರರಂತೆ ರಾಷ್ಟ್ರ ಗೀತೆ ಮಾದರಿಯಲ್ಲಿ ನಾಡಗೀತೆ ಹಾಗೂ ರೈತ ಗೀತೆಯಂಥ ಸಾಕಷ್ಟು ಗೀತೆಗಳನ್ನು ನೀಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಇಂಥ ಮಹನೀಯರ ಆದರ್ಶಗಳನ್ನು ಜೀವಂತವಾಗಿರಿಸುವ ಕೆಲಸವನ್ನು ಇಂದಿನ ಯುವಪೀಳಿಗೆ ಮಾಡಬೇಕು ಎಂದು ಕಿವಿಮಾತು ಹೇಳಿದ ಅವರು, ಮಾನವರೆಲ್ಲರೂ ಒಂದೇ ಜಾತಿ ಎಂದು ವಿಶ್ವ ಮಾನವತೆಯ ಸಂದೇಶ ಸಾರಿದ ಕುವೆಂಪು ಅವರ ಬದುಕು- ಬರಹ ಎಲ್ಲರಿಗೂ ಆದರ್ಶವೆಂದರು.

ಪುರ ಠಾಣೆ ಪಿಎಸೈ ಹರೀಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಪುಸ್ತಕಗಳನ್ನು, ಗಿಡಗಳನ್ನು ವಿತರಣೆ ಮಾಡಲಾಯಿತು.

ಚಕ್ಕೆರೆ ಯೋಗೇಶ್ ನಿರೂಪಿಸಿದರು.

ಕಕಜವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ, ರಾಜ್ಯ ಉಪಾಧ್ಯಕ್ಷ ರಂಜಿತ್ ಗೌಡ, ತಾಲೂಕು ಅಧ್ಯಕ್ಷ ಸತೀಶ್ ಬೈರಾಪಟ್ಟಣ, ಸಾರ್ವಜನಿಕ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ. ಚನ್ನಪ್ಪ, ನಿವೃತ್ತ ಉಪ ಪ್ರಾಂಶುಪಾಲ ಟಿ.ಆರ್. ರಂಗಸ್ವಾಮಿ, ನಗರಸಭೆ ಸದಸ್ಯರಾರ ವಾಸಿಲ್ ಆಲಿಖಾನ್, ಲಿಯಾಖತ್, ಮತೀನ್, ಕರಣ್ ಎಂ.ಎ. ಆನಂದ್, ಚೌ.ಪುಸ್ವಾಮಿ, ಹೊಟ್ಟಿಗನಹೊಸಹಳ್ಳಿ ರಮೇಶ್, ಮದ್ದೂರೇಗೌಡ, ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲು ಇತರರು ಇದ್ದರು.