ಸಾರಾಂಶ
ಬಿಜೆಪಿ ಅವಧಿಯಲ್ಲಿ ಪ್ರತಿ ಎಕರೆಗೆ ₹ 80 ಲಕ್ಷ ನಿಗದಿ ಪಡಿಸಿದ್ದ ದರವನ್ನು ಕಾಂಗ್ರೆಸ್ ಆಡಳಿತದಲ್ಲಿ ₹1.45 ಕೋಟಿಗೆ ಏರಿಕೆ ಮಾಡಿದ್ದಾರೆ. ಇದರಿಂದ ಕೈಗಾರಿಕೆಗೆ ಹಿನ್ನಡೆಯಾಗಿದೆ ಎಂದು ಅರವಿಂದ ಬೆಲ್ಲದ ಆರೋಪಿಸಿದ್ದರು.
ಹುಬ್ಬಳ್ಳಿ:
ಕೈಗಾರಿಕಾ ನಿವೇಶನಗಳ ದರವನ್ನು ಬಿಜೆಪಿ ಆಡಳಿತದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಏರಿಕೆ ಮಾಡಿದೆ. ಶಾಸಕ ಅರವಿಂದ ಬೆಲ್ಲದ ಮಾಹಿತಿ ಕೊರತೆಯಿಂದ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ನಿವೇಶನಗಳ ದರ ಏರಿಕೆ ಮಾಡಿದೆ ಎನ್ನುವ ಮೂಲಕ ಜನರ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರವಿಂದ ಬೆಲ್ಲದ ಅವರು ಈಚೆಗೆ ಈ ಭಾಗಕ್ಕೆ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜೂಮರ್ ಗೂಡ್ಸ್) ಕ್ಲಸ್ಟರ್ ಬಂದಿದೆ. ಆದರೆ, ಬಿಜೆಪಿ ಅವಧಿಯಲ್ಲಿ ಪ್ರತಿ ಎಕರೆಗೆ ₹ 80 ಲಕ್ಷ ನಿಗದಿ ಪಡಿಸಿದ್ದ ದರವನ್ನು ಕಾಂಗ್ರೆಸ್ ಆಡಳಿತದಲ್ಲಿ ₹1.45 ಕೋಟಿಗೆ ಏರಿಕೆ ಮಾಡಿದ್ದಾರೆ. ಇದರಿಂದ ಕೈಗಾರಿಕೆಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದುದು, ಸರ್ಕಾರದ ದಾಖಲೆಗಳ ಪ್ರಕಾರ ಬಿಜೆಪಿ ಸರ್ಕಾರ ಆಡಳಿತದ 2022ರ ನ. 23ರಂದೇ ಇಲ್ಲಿನ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಎಫ್‌ಎಂಜಿಸಿ ನಿವೇಶನಕ್ಕೆ ಪ್ರತಿ ಎಕರೆಗೆ ₹ 1.39 ಕೋಟಿ ನಿಗದಿಪಡಿಸಲಾಗಿದೆ. 2023ರಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕೈಗಾರಿಕಾ ನಿವೇಶದ ದರ ಪರಿಷ್ಕರಣೆಯಾಗಲಿ, ಏರಿಕೆಯಾಗಿಲಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ಕೈಗಾರಿಕೆಗಳ ಬೆಳವಣಿಗೆಯಾಗಿರುವುದನ್ನು ಯಾರು ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.