ಹಿಂದೂ ಸಮಾಜ ಜಾಗೃತಗೊಳಿಸಲು ರಥಯಾತ್ರೆ

| Published : Oct 09 2023, 12:47 AM IST

ಸಾರಾಂಶ

ಹಿಂದೂ ಸಮಾಜ ಜಾಗೃತಗೊಳಿಸಲು ಹಾಗೂ ನಮ್ಮ ಯುವಸಮೂಹವನ್ನು ಬಡಿದೆಬ್ಬಿಸುವ ಉದ್ದೇಶದಿಂದ ಇಂದು ದೇಶದೆಲ್ಲೆಡೆ ಶೌರ್ಯ ಜಾಗರಣಾ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಹಳಿಯಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಪತಿ ಭಟ್ ಹೇಳಿದರು.ಭಾನುವಾರ ಸಂಜೆ ಶ್ರೀ ಗಣೇಶ ದೇವಸ್ಥಾನದ ಬಳಿ ತಾಲೂಕು ವಿ.ಎಚ್.ಪಿ ಮತ್ತು ಭಜರಂಗದಳದವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಟ್ಟಣಕ್ಕೆ ಆಗಮಿಸಿದ ಶೌರ್ಯ ಜಾಗರಣಾ ಯಾತ್ರೆ ಬರಮಾಡಿಕೊಂಡು ಮಾತನಾಡಿದರು.

ಹಳಿಯಾಳಕ್ಕೆ ಆಗಮಿಸಿದ ಶೌರ್ಯ ಜಾಗರಣಾ ರಥಯಾತ್ರೆ । ವಿ.ಎಚ್.ಪಿ ತಾಲೂಕಾಧ್ಯಕ್ಷ ಶ್ರೀಪತಿ ಭಟ್ ಅಭಿಪ್ರಾಯಕನ್ನಡಪ್ರಭ ವಾರ್ತೆ ಹಳಿಯಾಳಹಿಂದೂ ಸಮಾಜ ಜಾಗೃತಗೊಳಿಸಲು ಹಾಗೂ ನಮ್ಮ ಯುವಸಮೂಹವನ್ನು ಬಡಿದೆಬ್ಬಿಸುವ ಉದ್ದೇಶದಿಂದ ಇಂದು ದೇಶದೆಲ್ಲೆಡೆ ಶೌರ್ಯ ಜಾಗರಣಾ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಹಳಿಯಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಪತಿ ಭಟ್ ಹೇಳಿದರು.

ಭಾನುವಾರ ಸಂಜೆ ಶ್ರೀ ಗಣೇಶ ದೇವಸ್ಥಾನದ ಬಳಿ ತಾಲೂಕು ವಿ.ಎಚ್.ಪಿ ಮತ್ತು ಭಜರಂಗದಳದವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಟ್ಟಣಕ್ಕೆ ಆಗಮಿಸಿದ ಶೌರ್ಯ ಜಾಗರಣಾ ಯಾತ್ರೆ ಬರಮಾಡಿಕೊಂಡು ಮಾತನಾಡಿದರು. ವಿಶ್ವಹಿಂದೂ ಪರಿಷತ್ ಸ್ಥಾಪನೆಯಾಗಿ ಅರವತ್ತು ವರ್ಷ ಆದ ಹಿನ್ನೆಲೆ ಹಾಗೂ ಶ್ರೀರಾಮ ಜನ್ಮಭೂಮಿ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದರಿಂದ ಈ ಶೌರ್ಯ ಜಾಗರಣಾ ರಥಯಾತ್ರೆ ಕೈಗೊಳ್ಳಲಾಗಿದೆ. ಭಾನುವಾರ ಹಳಿಯಾಳ ತಾಲೂಕಿಗೆ ರಥಯಾತ್ರೆ ಆಗಮಿಸಿದ್ದು, ತಾಲೂಕಿನೆಲ್ಲೆಡೆ ಹಿಂದೂ ಅಭಿಮಾನಿಗಳು ದೇಶಾಭಿಮಾನಿಗಳು ಈ ರಥಯಾತ್ರಗೆ ಉತ್ತಮ ಸ್ವಂದನೆ ನೀಡಿ ತಮ್ಮ ಶ್ರದ್ಧೆ ಭಕ್ತಿ ತೋರುತ್ತಿದ್ದಾರೆ ಎಂದರು.

ಹಿಂದೂ ಧರ್ಮದ ಮೇಲೆ ನೂರಾರು ವರ್ಷಗಳ ಕಾಲ ಪರಕೀಯರ ದಾಳಿ ನಡೆದರೂ ನಮ್ಮ ಧರ್ಮ ಈ ನೆಲದಲ್ಲಿ ನೆಲೆಯೂರಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಹಲವಾರು ಮಹನೀಯರು,ಸಾಧು ಸಂತರು ಮಾಡಿದ ತ್ಯಾಗ ಬಲಿದಾನಗಳು ನಮಗೆಲ್ಲ ಪ್ರೇರಣೆಯಾಗಲಿ. ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿಕೊಳ್ಳಲು ನಮ್ಮ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಲು ಈ ಶೌರ್ಯ ಜಾಗರಣಾ ರಥಯಾತ್ರೆ ಪ್ರೇರಣೆಯಾಗಲಿ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಭಾರತ ದೇಶ ಸನಾತನ ಹಿಂದೂ ಸಂಸ್ಕೃತಿಯ ದೇಶವಾಗಿದೆ. ಸನಾತನ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ವಿ.ಎಚ್.ಪಿ ಮತ್ತು ಭಜರಂಗದಳ ಬಹಳಷ್ಟು ಕೆಲಸ ಮಾಡಿದ್ದಾರೆ. ಈ ಶೌರ್ಯ ಜಾಗರಣಾ ಯಾತ್ರೆಯಲ್ಲಿ ಎಲ್ಲ ಸನಾತನ ಹಿಂದೂ ಧರ್ಮದ ಸಂಸ್ಕೃತಿಯವರು ಭಾಗವಹಿಸಿ ಇದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ದೇಶದ ಇತರೇ ಎಲ್ಲ ಜನರು ಈ ಯಾತ್ರೆಗೆ ಸಹಕಾರ ಕೊಟ್ಟು ಭಾರತ ಮಾತೆಗೆ ನಾವೆಲ್ಲ ಸೇರಿ ಮುಂದಿನ ದಿನಗಳಲ್ಲಿ ವಿಶ್ವದಲ್ಲಿಯೇ ಬಲಾಡ್ಯ ರಾಷ್ಟ್ರವನ್ನಾಗಿಸೋಣ ಎಂದರು.

ಕೆ.ಕೆ. ಹಳ್ಳಿ ಶ್ರೀ ನಿತ್ಯಾನಂದ ಮಠದ ಶ್ರೀ ಸುಬ್ರಹ್ಮಣ್ಯಂ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾ ಮುಖಂಡರು ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದ ಟ್ರಸ್ಟ್ ಮಂಡಳಿಯ ಅಧ್ಯಕ್ಷ ಮಂಗೇಶ ದೇಶಪಾಂಡೆ, ಬಿಜೆಪಿ ತಾಲೂಕಾಧ್ಯಕ್ಷ ಗಣಪತಿ ಕರಂಜೇಕರ, ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳೆ, ಉಮೇಶ ದೇಶಪಾಂಡೆ, ವಿಲಾಸ ಯಡವಿ, ಮಂಜುನಾಥ ಪಂಡಿತ, ಪುರಸಭಾ ಸದಸ್ಯ ಉದಯ ಹೂಲಿ, ಸಂತೋಷ ಘಟಕಾಂಬ್ಳೆ, ಚಂದ್ರು ಕಮ್ಮಾರ, ಶಾಂತಾ ಹಿರೇಕರ, ರೂಪಾ ಗಿರಿ, ಜಯಲಕ್ಷ್ಮಿ ಚವ್ಹಾಣ, ನಾರಾಯಣ ಠೊಸುರ, ಅನಿಲ ಮಾಳೋದೆ ಹಾಗೂ ಇತರರು ಇದ್ದರು.

ಪಟ್ಟಣದ ಮುಖ್ಯ ಬೀದಿಯಲ್ಲಿ ಝಾಂಜ ಪಥಕದ ತಂಡದ ವಾದ್ಯಮೇಳದೊಂದಿದೆ ಮೆರವಣಿಗೆ ನಡೆಸಲಾಯಿತು.

ರಥಯಾತ್ರೆ:

ಬೆಳಗ್ಗೆ ಹಳಿಯಾಳ ತಾಲೂಕಿಗೆ ಆಗಮಿಸಿದ ಶೌರ್ಯ ರಥಯಾತ್ರೆಯನ್ನು ವಿ.ಎಚ್.ಪಿ ತಾಲೂಕಾಧ್ಯಕ್ಷ ಶ್ರೀಪತಿ ಭಟ್, ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ ಮುತ್ನಾಳೆ ಸ್ವಾಗತಿಸಿ ಬರಮಾಡಿಕೊಂಡರು.ತದ ನಂತರ ರಥಯಾತ್ರೆಯು ಸಾತಮನಿ, ಜಾವಳ್ಳಿ, ಯಡೋಗಾ ಗ್ರಾಮಗಳಲ್ಲಿ ಸಂಚರಿಸಿ, ಬಿದ್ರೋಳ್ಳಿ, ಪಾಳಾ ಮೂಲಕ ಮಂಗಳವಾಡ, ತೇರಗಾಂವ ಹಾಗೂ ಹವಗಿ ಗ್ರಾಮಗಳಲ್ಲಿ ತೆರಳಿ ಸಂಚರಿಸಿತು.

8ಎಚ್.ಎಲ್.ವೈ-1: ಭಾನವಾರ ಹಳಿಯಾಳ ತಾಲೂಕಿನಲ್ಲಿ ಸಂಚಾರ ಕೈಗೊಂಡು ಸಂಜೆ ಪಟ್ಟಣಕ್ಕೆ ಆಗಮಿಸಿದ ಶೌರ್ಯ ಜಾಗರಣಾ ರಥಯಾತ್ರೆಯನ್ನು ಶ್ರೀ ಗಣೇಶ ದೇವಸ್ಥಾನದ ಬಳಿ ಶಾಸ್ತ್ರೋಕ್ತವಾಗಿ ಬರಮಾಡಿಕೊಳ್ಳಲಾಯಿತು.