ಸಂಭ್ರಮದಿಂದ ಜರುಗಿದ ರಥೋತ್ಸವ

| Published : Feb 26 2024, 01:33 AM IST

ಸಾರಾಂಶ

ಅಮೀನಗಡ ಸಮೀಪದ ಸೂಳೇಬಾವಿಯಲ್ಲಿ ಶ್ರೀಬನಶಂಕರೀದೇವಿ ಭಾವೈಕ್ಯತಾ ರಥೋತ್ಸವ ಅದ್ಧೂರಿಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಅಮೀನಗಡ

ಸಮೀಪದ ಸೂಳೇಬಾವಿಯಲ್ಲಿ ಶ್ರೀಬನಶಂಕರೀದೇವಿ ಭಾವೈಕ್ಯತಾ ರಥೋತ್ಸವ ಅದ್ಧೂರಿಯಿಂದ ಜರುಗಿತು.

ಒಂದು ವಾರದ ಹಿಂದೆ ಮುಸ್ಲಿಂ ಸಮಾಜ ಬಾಂಧವರಿಂದ ಶ್ರೀ ಬನಶಂಕರಿದೇವಿ ರಥಕ್ಕೆ ಗರುಡಪಠ ಏರಿಸುವ ಮೂಲಕ ಪ್ರಾರಂಭಗೊಳ್ಳುವ ಇಲ್ಲಿನ ಜಾತ್ರಮಹೋತ್ಸವ, ರಥೋತ್ಸವದಂದು ಹರಿಜನರಿಂದ ಸಮಾಜದವರು ಗರ್ಭಗುಡಿ ಪ್ರವೇಶಿಸಿ, ದೇವಿಗೆ ಅಲಂಕಾರ ಮಾಡುವ ಮೂಲಕ ಸರ್ವಸಮಾಜ ಬಾಂಧವರು ಒಂದಾಗಿ ಆಚರಿಸುವ ಈ ಜಾತ್ರಾ ಮಹೋತ್ಸವ ಭಾವೈಕ್ಯತೆಯ ಬನಶಂಕರಿದೇವಿ ಜಾತ್ರಾ ಮಹೋತ್ಸವ ಎನಿಸಿದೆ. ಭಾವೈಕ್ಯತಾ ರಥೋತ್ಸವ ವೀಕ್ಷಿಸಲು ಭಾನುವಾರ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಪಾಲ್ಗೊಂಡಿತ್ತು.

ಅದರಂತೆ ರಥೋತ್ಸವದಲ್ಲಿ ಗ್ರಾಮದ ಬನಶಂಕರಿದೇವಿ ದೇವಸ್ಥಾನದಿಂದ ಭಾವೈಕ್ಯತೆಯ ಮಹಾದ್ವಾರದ ಪಾದಗಟ್ಟೆಯವರೆಗೂ ಶ್ರೀ ಬನ ಶಂಕರೀದೇವಿ ಭಾವೈಕ್ಯತಾ ರಥವನ್ನು ಸರ್ವಸಮಾಜ ಭಕ್ತರು ಎಳೆದರು. ದೂರದೂರಿಂದ ಬಂದ ಹೆಣ್ಣುಮಕ್ಕಳು, ಮಕ್ಕಳು, ಕೆಲವು ಹಿರಿಯ ನಾಗರಿಕರು ತೇರನ್ನು ಎಳೆದ ನಂತರ ಬಂದು ನಿಂತ ತೇರಿಗೆ ಉತ್ತತ್ತಿ ಎಸೆಯುವುದರ ಮೂಲಕ ತೃಪ್ತಿಪಟ್ಟು ಕೊಂಡರು.

ಸೂಳೇಬಾವಿ, ಅಮೀನಗಡ, ತಳ್ಳೀಕೇರಿ, ಗೊರ್ಜನಾಳ, ಕೆಲೂರ, ಐಹೊಳೆ, ನಿಂಬಲಗುಂದಿ, ಮುಳ್ಳೂರ, ಕುಣ ಬೆಂಚಿ, ಹೂವಿನಹಳ್ಳಿ, ಕಳ್ಳಿಗುಡ್ಡ, ಕ್ಯಾದಿಗೇರಿ, ಚಿಲಾಪುರ, ಚಿತ್ತರಗಿ, ಗುಡೂರ ಮುಂತಾದ ಗ್ರಾಮ ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಉತ್ತತ್ತಿ ಖರ್ಜೂರಗಳನ್ನು ಎಸೆದು ಭಕ್ತಿಪರವಶತೆ ಮೆರೆದರು.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಜಾತ್ರಾ ಕಮಿಟಿ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಜಾತ್ರಾ ಕಮಿಟಿಯ ಸದಸ್ಯರು, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.