14ರಂದು ಧಾರವಾಡ ಮುರುಘಾಮಠದ ರಥೋತ್ಸವ

| Published : Feb 09 2024, 01:51 AM IST

ಸಾರಾಂಶ

ಫೆ.13ರಂದು ಸಂಜೆ 7ಕ್ಕೆ ಬೀದರ ಜಿಲ್ಲೆಯ ಹಾರಕೋಡದ ಚನ್ನವೀರ ಸಂಸ್ಥಾನಮಠದ ಡಾ. ಚನ್ನವೀರ ಶಿವಾಚಾರ್ಯರಿಗೆ 10 ಗ್ರಾಂ ಚಿನ್ನದ ಪದಕ ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ಪಲಕದೊಂದಿಗೆ ಸಚಿವ ಮಧು ಬಂಗಾರಪ್ಪ ಮೃತ್ಯುಂಜಯ-ಮಹಾಂತ ಪ್ರಶಸ್ತಿ ಪ್ರಧಾನ ಮಾಡುವರು

ಧಾರವಾಡ: ಉತ್ತರ ಕರ್ನಾಟಕದಲ್ಲಿಯೇ ತ್ರಿವಿಧ ದಾಸೋಹದಲ್ಲಿ ಹೆಸರು ಮಾಡಿರುವ ಇಲ್ಲಿಯ ಪ್ರತಿಷ್ಟಿತ ಮುರುಘಾಮಠದ ಲಿಂ.ಅಥಣಿ ಮುರಘೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವ ಫೆ.10 ರಿಂದ 14ರ ವರೆಗೆ ಜರುಗಲಿದೆ.

ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಐದು ದಿನಗಳ ಕಾಲ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ 94ನೇ ಜಾತ್ರಾಮಹೋತ್ಸವ, ಗ್ರಂಥ ಲೋಕಾರ್ಪಣೆ ಹಾಗೂ 2024 ನೇ ಶ್ರೀಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರದಾನ, ಶಿವಾನುಭ ಚಿಂತನ, ವಚನ ನೃತ್ಯ ಹಾಗೂ ಗಾಯನವು ಜಾತ್ರಾ ಅಂಗವಾಗಿ ಮಠದ ಆವರಣದಲ್ಲಿ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಭಾಗವಹಿಸಬೇಕೆಂದು ಮನವಿ ಮಾಡಿದರು.

ಜಾತ್ರೆ ಉದ್ಘಾಟನೆ: ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಕಳೆದ ಫೆ.5 ರಿಂದ ಪ್ರವಚನ ಶುರುವಾಗಿದ್ದು, ಜ.10ರ ಷಟ್‌ಸ್ಥಲ ಧ್ವಜಾರೋಹಣ ಜರುಗಲಿದೆ. ನಿಜಗುಣ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ 7ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಸಂತೋಷ ಲಾಡ್‌ ನೆರವೇರಿಸುತ್ತಾರೆ. ಚನ್ನಬಸವಣ್ಣನವರ ಕರಣ ಹಸಿಗೆ ವ್ಯಾಖ್ಯಾನ ಸಂಪುಟ ಲೋಕಾರ್ಪಣೆಯು ಮೂರಸಾವಿಮಠದ ಶ್ರೀಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಇಳಕಲ್ ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುಬಸವಲಿಂಗ ಸ್ವಾಮೀಜಿ ಗುರುವಂದನೆ ಜರುಗಲಿದೆ. ಶಿವಲೀಲಾ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸುತ್ತಾರೆ. ಬಿ.ವಿ. ಚಿಕ್ಕಮಠ ಅವರನ್ನು ಸನ್ಮಾನಿಸಲಾಗುವುದು ಎಂದರು.

ಉಪನ್ಯಾಸ: ಫೆ.11ರ ಸಂಜೆ 7ಕ್ಕೆ ಶಿವಾನುಭವ ಚಿಂತನ-1ರ ಸಾನ್ನಿಧ್ಯವನ್ನು ಶಿವಬಸವ ಸ್ವಾಮೀಜಿ ವಹಿಸಲಿದ್ದು, ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಕುರಿತು ಡಾ. ವೀಣಾ ಬಿರಾದಾರ ಉಪನ್ಯಾಸ ನೀಡುವರು. ಫೆ.12ರ ಸಂಜೆ 7ಕ್ಕೆ ನಿಡಸೂಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿವಾನುಭವ ಚಿಂತನ-2 ನಡೆಯಲಿದೆ. ಜಾನಪದದಲ್ಲಿ ಶರಣರು ಕುರಿತು ಪ್ರೊ.ಶಕುಂತಲಾ ಸಿಂಧೂರ ಉಪನ್ಯಾಸ ನೀಡುವರು. ಮಾಜಿ ಮಂತ್ರಿ ಜಗದೀಶ ಶೆಟ್ಟರ, ಮಹಾಪೌರ ವೀಣಾ ಭಾರದ್ವಾಡ ಭಾಗವಹಿಸುತ್ತಾರೆ ಎಂದರು.

ಪ್ರಶಸ್ತಿ ಪ್ರದಾನ: ಫೆ.13ರಂದು ಸಂಜೆ 7ಕ್ಕೆ ಬೀದರ ಜಿಲ್ಲೆಯ ಹಾರಕೋಡದ ಚನ್ನವೀರ ಸಂಸ್ಥಾನಮಠದ ಡಾ. ಚನ್ನವೀರ ಶಿವಾಚಾರ್ಯರಿಗೆ 10 ಗ್ರಾಂ ಚಿನ್ನದ ಪದಕ ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ಪಲಕದೊಂದಿಗೆ ಸಚಿವ ಮಧು ಬಂಗಾರಪ್ಪ ಮೃತ್ಯುಂಜಯ-ಮಹಾಂತ ಪ್ರಶಸ್ತಿ ಪ್ರಧಾನ ಮಾಡುವರು. ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ, ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಪಾಲ್ಗೊಳ್ಳುವರು. ಇನ್ನು, ಕೊನೆ ದಿನ ಫೆ.14ರಂದು ಬೆಳಗ್ಗೆ ಲಿಂಗದೀಕ್ಷೆಯಲ್ಲಿ ರೇವಣಸಿದ್ದೇಶ್ವರ ಶಿವಾಚಾರ್ಯರು, ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು,. ಸಂಜೆ 4ಕ್ಕೆ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ರಥೋತ್ಸವವು ನಡೆಯಲಿದ್ದು, ವಿವಿಧ ಮಠಾಧೀಶರು ಸಮ್ಮುಖ ವಹಿಸುವರು ಎಂದು ಡಾ. ಮಲ್ಲಿಕಾರ್ಜುನ ಸ್ವಾಮೀಜಿ ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ಆಡಳಿತ ಮಂಡಳಿಯ ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಸಿದ್ದರಾಮಣ್ಣ ನಡಕಟ್ಟಿ, ಎಸ್.ಎಸ್. ಲಕ್ಷ್ಮೇಶ್ವರ, ಸಿ.ಎಸ್. ಪಾಟೀಲ್, ಎಂ.ಎಸ್. ಸಾಲಿಮಠ ಇದ್ದರು.