ಪಡಿತರ ತಿದ್ದುಪಡಿ: ಸರ್ವರ್ ಸಮಸ್ಯೆಗೆ ಸಿಗದ ಪರಿಹಾರ
KannadaprabhaNewsNetwork | Published : Oct 13 2023, 12:16 AM IST
ಪಡಿತರ ತಿದ್ದುಪಡಿ: ಸರ್ವರ್ ಸಮಸ್ಯೆಗೆ ಸಿಗದ ಪರಿಹಾರ
ಸಾರಾಂಶ
ಹೆಸರು ತಿದ್ದುಪಡಿ, ಸೇರ್ಪಡೆ ಅಪೂರ್ಣ, ಇನ್ನು ಒಂದು ದಿನ ಮಾತ್ರ ಬಾಕಿ, ಆತಂಕದಲ್ಲಿ ಜನ
ಶಹಾಪುರ: ಸರ್ಕಾರದ ವತಿಯಿಂದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆಗೆ ಅವಕಾಶ ನೀಡಿದೆ. ಬಹುತೇಕರು ಸರ್ವರ್ ಸಮಸ್ಯೆಯಿಂದ ನೊಂದಣಿ ಮಾಡಲು ಆಗುತ್ತಿಲ್ಲ. ಸರ್ಕಾರ ಕಾಟಾಚರಾಕ್ಕೆ ಪಡಿರ ಚೀಟಿಗೆ ಅವಕಾಶ ಕೊಟ್ಟು, ಜನರನ್ನು ಹೈರಾಣಾಗಿಸುತ್ತಿದೆ. ಯಾದಗಿರಿ ಜಿಲ್ಲೆಗೆ ಅ.11ರಿಂದ 13ರವರೆಗೆ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಬೆಳಗ್ಗೆ 10 ರಿಂದ 7 ಗಂಟೆಯವರೆಗೆ ಸಮಯವಿದೆ. ಸರ್ಕಾರ ಬಹಳ ದಿನಗಳ ನಂತರ ಈ ಅವಕಾಶ ಕಲ್ಪಿಸಿದ್ದು, ಅ.11ರಂದು ಮೊದಲ ದಿನ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಅ.12 ಗುರುವಾರ ಎರಡನೇ ದಿನ ಸರ್ವರ್ ಸಮಸ್ಯೆ ಆಗ್ತುತಿದ್ದು, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಕ್ಯು ನಿಂತು ಬರಿಗೈಯಲ್ಲಿ ವಾಪಾಸ್ ಹೋಗುವಂತಾಗಿದೆ. ಸರ್ಕಾರ ನೀಡಿರುವ ಮೂರು ದಿನಗಳ ಕಾಲಾವಕಾಶದಲ್ಲಿ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಸರ್ವರ್ ಸಮಸ್ಯೆಯಲ್ಲಿಯೇ ಮೂರು ದಿನಗಳು ಮುಗಿದು ಹೋಗುವ ಆತಂಕ ಜನರಲ್ಲಿ ಶುರುವಾಗಿದೆ. ಪಡಿತರ ಚೀಟಿ ತಿದ್ದುಪಡಿಗಾಗಿ ಚಿಕ್ಕ ಮಕ್ಕಳ ತಾಯಂದಿರು, ಮಹಿಳೆಯರು, ವೃದ್ಧರು ಕೇಂದ್ರಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸೇವೆಗಳು ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು, ಸರ್ವರ್ ನಿಧಾನಗತಿ ಸಮಸ್ಯೆ ಜನರಿಗೆ ತಟ್ಟುತ್ತಿದೆ. ಸರ್ಕಾರದ ಯೋಜನೆಗಳ ಲಾಭ ಸಮಪರ್ಕವಾಗಿ ಪಡೆಯಲು ಆಗುತ್ತಿಲ್ಲ. ಜನರು ಕೆಲಸ ಕಾರ್ಯಗಳನ್ನು ಬಿಟ್ಟು ನಿತ್ಯ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. ಪಡಿತರ ಚೀಟಿಯಲ್ಲಿ ನಮ್ಮ ಮಕ್ಕಳ ಹೆಸರು ಸೇರಿಸಲು ನಿನ್ನೆಯಿಂದ ಬರುತ್ತಿದ್ದೇವೆ. ಆದರೆ, ಸರ್ವರ್ ಸಮಸ್ಯೆ ಕಾಡುತ್ತಿದೆ. ಬೆಳಿಗ್ಗೆನೇ ಬರುತ್ತಿದ್ದೇವೆ. ಇದುವರೆಗೂ ಊಟ ಮಾಡಿಲ್ಲ, ಸರದಿ ಸಾಲಲ್ಲಿ ನಿಂತು ಸುಸ್ತಾಗುತ್ತಿದೆ. ಈ ಸರ್ವರ್ ಸಮಸ್ಯೆ ನಮ್ಮನ್ನು ಹೈರಾಣು ಮಾಡುತ್ತಿದೆ. ಅಲ್ಲದೇ ನಮ್ಮ ನಿತ್ಯದ ಕೆಲಸಗಳ ಬಿಟ್ಟು ಬರುತ್ತಿದ್ದೇವೆ " ಎಂದು ಮಕ್ಕಳ ತಾಯಂದಿರು ಹಿಡಿಶಾಪ ಹಾಕುತ್ತಿದ್ದಾರೆ. ಅವಧಿ ವಿಸ್ತರಣೆಗೆ ಆಗ್ರಹ: ಪಡಿತರ ಚೀಟಿಯಲ್ಲಿ ತಿದ್ದುಪಡಿ, ಹೆಸರು ಸೇರ್ಪಡೆಗೆ ಸರ್ಕಾರ ಅವಕಾಶ ನೀಡಿದೆ. ಜನರು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಾಲಾಗಿ ನಿಲ್ಲುತ್ತಿದ್ದಾರೆ. ಸರ್ವರ್ ಸಮಸ್ಯೆಯ ಕಾಟ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಈ ಅವಕಾಶದ ಅವಧಿಯನ್ನು ವಿಸ್ತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.