ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ದೊಡ್ಡಮಲ್ಲಿಗೆರೆಯಲ್ಲಿ ನೂತನ ಪಡಿತರ ವಿತರಣಾ ಘಟಕವನ್ನು ಜಿಲ್ಲಾ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಎಂ.ಸಿದ್ದಲಿಂಗಪ್ಪ ಉದ್ಘಾಟಿಸಿದರು. ಕಣಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಕಟ್ಟಡದಲ್ಲಿ ದೊಡ್ಡಮಲ್ಲಿಗೆರೆ ಸೇರಿದಂತೆ ಹತ್ತಾರು ಸುತ್ತಮುತ್ತಲ ಗ್ರಾಮಗಳ ಕುಟುಂಬಗಳಿಗೆ ಪಡಿತರ ವಸ್ತುಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ ಅಲ್ಲಿಯ ಗ್ರಾಮಸ್ಥರಿಗೆ ಕಣಕೂರಿಗೆ ತೆರಳಿ ಪಡಿತರ ವಸ್ತುಗಳನ್ನು ತಮ್ಮ ಗ್ರಾಮಕ್ಕೆ ತರಲು ಅಸಾಧ್ಯವಾದ ಮಾತಾಗಿತ್ತು. ಇದನ್ನು ಗಮನಿಸಿದ ಕಣಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೊಡ್ಡಮಲ್ಲಿಗೆರೆಯ ನಿರ್ದೇಶಕಿ ವನಜಾಕ್ಷಮ್ಮ ಜಗದೀಶ್ ರವರು ದೊಡ್ಡಮಲ್ಲಿಗೆರೆ, ಚಿಕ್ಕಮಲ್ಲಿಗೆರೆ, ಕೋಡಿಹಳ್ಳಿ, ದೊಡ್ಡಮಲ್ಲಿಗೆರೆ ಪಾಳ್ಯ ಮತ್ತು ದೊಡ್ಡಮಲ್ಲಿಗೆರೆಯ ಗೊಲ್ಲರಹಟ್ಟಿಯ ಸುಮಾರು 250 ಕ್ಕೂ ಹೆಚ್ಚು ಕುಟುಂಬದ ಸದಸ್ಯರಿಗೆ ದೊಡ್ಡಮಲ್ಲಿಗೆರೆಯಲ್ಲೇ ಪಡಿತರ ವಸ್ತುಗಳನ್ನು ಸರಬರಾಜು ಮಾಡಬೇಕೆಂದು ವಿನಂತಿಸಿಕೊಂಡಿದ್ದರು. ಇವರ ಮನವಿ ಮೇರೆಗೆ ಕಣಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮತ್ತು ಸಂಘದ ಪದಾದಿಕಾರಿಗಳು ಸಭೆ ಸೇರಿ ದೊಡ್ಡಮಲ್ಲಿಗೆರೆಯಲ್ಲೇ ಪಡಿತರ ವಸ್ತುಗಳ ವಿತರಣೆ ಮಾಡುವ ಘಟಕವನ್ನು ತೆರೆಯಲು ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 250 ಕ್ಕೂ ಹೆಚ್ಚು ಕಾರ್ಡ್‌ದಾರರಿಗೆ ದೊಡ್ಡಮಲ್ಲಿಗೆರೆಯಲ್ಲಿ ಪಡಿತರ ವಿತರಣೆ ಘಟಕವನ್ನು ಪ್ರಾರಂಭ ಮಾಡಲಾಗಿದೆ ಎಂದು ಘಟಕ ಉದ್ಘಾಟಿಸಿದ ಸಿದ್ದಲಿಂಗಪ್ಪ ತಿಳಿಸಿದರು.ಹಿರಿಯ ನಾಗರೀಕರಾದ ಜವರಪ್ಪ ಮಾತನಾಡಿ ನೂತನವಾಗಿ ಘಟಕ ತೆರೆದು ಪಡಿತರ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದು ಸ್ವಾಗತಾರ್ಹವಾದುದು. ಗ್ರಾಮಾಂತರ ಪ್ರದೇಶದಲ್ಲಿರುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಓಡಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡು ಇಲ್ಲೇ ಪಡಿತರ ವಸ್ತುಗಳನ್ನು ವಿತರಣೆ ಮಾಡಲು ಸಹಕರಿಸಿದ ಕಣಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಇತರೆ ಎಲ್ಲಾ ಪದಾದಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಣಕೂರು ಸಂಘದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಅಂದಾನಿಗೌಡ, ನಿರ್ದೇಶಕರಾದ ಕಾಂತಣ್ಣ. ರಮೇಶ್, ಮೇಘ, ವನಜಾಕ್ಷಮ್ಮ ಜಗದೀಶ್, ಕೆಂಚಯ್ಯ, ಕರಿಯಪ್ಪ, ನಾಗರಾಜು, ಜಹೀರ್, ಸಂಘದ ಮೇಲ್ವಿಚಾರಕ ಹರೀಶ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹೇಶ್ವರ್, ಗ್ರಾಮ ಪಂಚಾಯಿತಿ ಸದಸ್ಯ ಯಶೋಧರ್, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪದ್ಮ ಚಂದ್ರಶೇಖರ್, ರೇಖಾ ಶಿವಶಂಕರ್, ಮಂಜಮ್ಮ ಸದಾಶಿವಯ್ಯ, ಯಶೋಧಮ್ಮ ಮೋಕ್ಷಪಾಲ್, ಗ್ರಾಮದ ಮುಖಂಡರಾದ ಜಗದೀಶ್, ಏಕದಂತ ಯುವಕರ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸವರಾಜು ಕಾರ್ಯಕ್ರಮ ನಿರೂಪಿಸಿದರು.